ಬೆಳ್ತಂಗಡಿ: ಚಾರ್ಮಾಡಿ ಹಾಗೂ ಪರಿಸರದಲ್ಲಿ ಬುಧವಾರ ಮುಂಜಾನೆ ಉತ್ತಮ ಮಳೆ ಸುರಿದಿದೆ. ಸಂಜೆ ವೇಳೆಗೆ ಗುಡುಗು, ಸಿಡಿಲು ಸಹಿತ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.
ಚಾರ್ಮಾಡಿ, ಮುಂಡಾಜೆ ಸಹಿತ ಸುತ್ತಮುತ್ತ ಬುಧವಾರ ಬೆಳಗಿನ ಜಾವ 4ರ ಸುಮಾರಿಗೆ ಆರಂಭವಾದ ಮಳೆ 6.30ರ ವರೆಗೆ ಮುಂದುವರಿದಿತ್ತು. ಚಾರ್ಮಾಡಿ ಘಾಟಿ ಭಾಗದಲ್ಲಿ ಮಂಗಳವಾರ ಸಂಜೆಯಿಂದ ಎಡಬಿಡದೆ ಮಳೆ ಸುರಿದಿದ ಪರಿಣಾಮ ಮೃತ್ಯುಂಜಯ ನದಿಯಲ್ಲಿ ಬುಧವಾರ ಬೆಳಗ್ಗೆ ಏಕಾಏಕಿ ನೀರಿನ ಹರಿವು ಹೆಚ್ಚಿದೆ. ಕಿಂಡಿ ಅಣೆಕಟ್ಟಿನಲ್ಲಿ ನೀರು ತುಂಬಿ ಮೇಲಿನಿಂದ ಹರಿದಿದೆ. ಇದರಿಂದ ನದಿಯ ನೀರನ್ನೇ ಆಶ್ರಯಿಸಿರುವ ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ.
ಸಿಡಿಲು ಬಡಿದು ಹಾನಿ
ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮತ್ತೆ ಗುಡುಗು, ಸಿಡಿಲು ಸಹಿತ ಅರ್ಧ ತಾಸಿಗೂ ಅಧಿಕ ಮಳೆಯಾಗಿದೆ. ಉಜಿರೆ ಗ್ರಾಮದ ಮಾಚಾರು ಗುಂಡಿಕಂಡ ಮಣಿಕ್ಕೆಯ ಬಾಬು ಮುಗೇರ ಅವರ ಮನೆಗೆ ಸಿಡಿಲು ಬಡಿದು ಮೀಟರ್ ಬೋರ್ಡ್, ಗೋಡೆ ಸಹಿತ, ಶೀಟ್ ಹಾನಿಗೀಡಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಗ್ರಾ.ಪಂ. ಸದಸ್ಯ ಗುರುಪ್ರಸಾದ್ ಭೇಟಿ ನೀಡಿದ್ದಾರೆ.ಕೊಯ್ಯೂರು ಗ್ರಾಮದ ಮೈಂದಕೊಡಿ ಲೋಕಯ್ಯ ಗೌಡ ಅವರ ಮನೆಯ ಮುಂಭಾಗದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಿದ್ದು ಬೆಂಕಿ ಹತ್ತಿಕೊಂಡಿತು.
ಬೆಳ್ತಂಗಡಿ, ನಡ, ಮಂಜೊಟ್ಟಿ, ಗುರುವಾಯನಕೆರೆ ಸಹಿತ ಗೇರುಕಟ್ಟೆ, ಕಳಿಯ ಇತರೆಡೆ ಮಳೆಯಾಗಿದ್ದು, ಗುರುವಾಯನಕೆರೆ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಚರಂಡಿ ಕಾರ್ಯ ಅಪೂರ್ಣಗೊಂಡ ಪರಿಣಾಮ ಚರ್ಚ್ ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತು ಪಕ್ಕಡ ಅಂಗಡಿ ಮುಂಗಟ್ಟುಗಳ ಸುತ್ತ ನೀರು ನಿಂತಿತ್ತು. ವಾಹನ ಸವಾರರು ಪರದಾಡಿದರು. ಸಿಡಿಲಿನ ಆಘಾತಕ್ಕೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ.