ಮಂಗಳೂರು: ಬಿಜೆಪಿ ಸರ್ಕಾರ ಇದ್ದಾಗಲೂ ಬಾಂಬ್ ಬ್ಲಾಸ್ಟ್ ಆಗಿದೆ. ಬಿಜೆಪಿಯ ಕಾಲದಲ್ಲಿ ಅವರ ಕಚೇರಿ ಹತ್ತಿರವೇ ಬಾಂಬ್ ಬ್ಲಾಸ್ಟ್ ಆಗಿತ್ತು. ಶಿವಾಜಿ ನಗರ, ಚರ್ಚ್ ಸ್ಟ್ರೀಟ್ ಹಾಗೂ ಅನೇಕ ಕಡೆಗಳಲ್ಲಿ ಆಗಿತ್ತು. ಆದರೆ ಈ ಬಗ್ಗೆ ಸುಮ್ಮನಿದ್ದು, ರಾಮೇಶ್ವರಂ ಕೆಫೆ ಸ್ಪೋಟ ವಿಚಾರವಾಗಿ ಮಾತ್ರ ಬಿಜೆಪಿಗರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬಿಜೆಪಿಗರು ಕರ್ನಾಟಕದ ಹೆಸರು ಹಾಳು ಮಾಡಬೇಕು, ಭಯ ಸೃಷ್ಟಿಸಬೇಕು, ಜನ ಬರಬಾರದೆಂದು ಬಾಂಬ್ ಬೆಂಗಳೂರು ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಕ್ಕೆ ನಿನ್ನೆಯೇ ಬಂಡವಾಳ ಹೂಡಿಕೆಗೆ ಅನುಮೋದನೆ ಆಗಿದೆ. ದೇಶದಲ್ಲಿ ಅತೀ ಹೆಚ್ಚು ಬಂಡವಾಳ ಬರುವ ರಾಜ್ಯ ಕರ್ನಾಟಕ ಮತ್ತು ಮಹಾರಾಷ್ಟ್ರ. ಆದರೆ ಈ ಘಟನೆಯನ್ನು ಪರಿಗಣಿಸಬೇಕು ಕ್ರಮ ಕೈಗೊಳ್ಳಬೇಕು. ಆದರೆ ಬಿಜೆಪಿ ಹೇಳಿದಾಕ್ಷಣ ಬಾಂಬ್ ಬೆಂಗಳೂರು ಆಗೋಲ್ಲ. ಆದರೆ ಇಂತಹ ಘಟನೆಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ನಾವು ಆಡಳಿತದಲ್ಲಿ ಇದ್ದೇವೆ ನಾವು ತನಿಖೆ ಮಾಡುತ್ತಿದ್ದೇವೆ. ರಾಷ್ಟ್ರದ ತನಿಖಾ ತಂಡ, ರಾಜ್ಯ ಪೋಲಿಸರು ಸೇರಿ ತನಿಖೆ ಮಾಡುತ್ತಿದ್ದೇವೆ ಇದು ಸೂಕ್ಷ್ಮ ಹಾಗೂ ಗಂಭೀರವಾದ ವಿಚಾರ. ಆದ್ದರಿಂದ ಸರ್ಕಾರ ಯಾವುದೇ ರೀತಿಯ ರಿಯಾಯಿತಿ ಕೊಡುವುದಿಲ್ಲ ಎಂದರು.