ನಾನು ಜೆಡಿಎಸ್‌ನಲ್ಲೇ ಇದ್ದೇನೆ, ಬಿಜೆಪಿಗೂ ಸಪೋರ್ಟ್ ಮಾಡ್ತೇನೆ…. ಆದರೆ….: ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಬಾವಾ ಹೇಳಿದ್ದು ಹೀಗೆ…..

ಮಂಗಳೂರು: ನಾನು ಸದ್ಯಕ್ಕೆ ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಬಿಜೆಪಿಗೂ ಬೆಂಬಲ ನೀಡುತ್ತೇನೆ. ಅದರೆ ಬಿಜೆಪಿಯ ಎಲ್ಲಾ ಸಿದ್ಧಾಂತಗಳೊಂದಿಗೆ ನನಗೆ ಸಹಮತ ಇಲ್ಲ ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್‌ ಬಿಟ್ಟಿಲ್ಲ. ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತೇನೆ. ಆದರೆ ಬಿಜೆಪಿಯ ಎಲ್ಲಾ ಸಿದ್ಧಾಂತಗಳೊಂದಿಗೆ ನನಗೆ ಸಹಮತ ಇಲ್ಲ ಎಂದರು.

ಸಿಎಎ, ಹಿಜಾಬ್, ಆಝಾನ್‌ಗೆ ವಿರೋಧ ಮೊದಲಾದ ಬಿಜೆಪಿಯ ಸಿದ್ಧಾಂತಗಳನ್ನು ನಾನು ವಿರೋಧಿಸುತ್ತೇನೆ. ಅಗತ್ಯ ಬಿದ್ದಲ್ಲಿ‌ ಇದರ ವಿರುದ್ಧ ಹೋರಾಟವೂ ಮಾಡುತ್ತೇನೆ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಲ್ಲಡ್ಕ ಶಾಲೆಗೆ ಭೇಟಿಯನ್ನು ನಾನು ವಿರೋಧಿಸುತ್ತೇನೆ. ಈ ಬಗ್ಗೆ ಖುದ್ದು ಅವರಲ್ಲಿಯೇ ಹೇಳಿದ್ದೇನೆ ಎಂದರು.

ಕಾರ್ಯಕರ್ತರು, ಅಭಿಮಾನಿಗಳು ನನ್ನನ್ನು ಲೋಕಸಭಾ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸಲು ಒತ್ತಾಯ ಮಾಡುತ್ತಿದ್ದಾರೆ. ಆದರೆ ನಾನು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಬಾವಾ ಹೇಳಿದರು.
ಈ ಕುರಿತು ಮುಂದಿನ ಗುರುವಾರ ಸಭೆ ನಡೆಸಲಿದ್ದೇನೆ ಎಂದರು.

Latest Indian news

Popular Stories