ಮಂಗಳೂರು: ನಗರದ ಸಂತ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಹಿಂದೂ ಧರ್ಮದ ನಿಂದನೆ ಆರೋಪದ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಸರಕಾರ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಅವರನ್ನು ನೇಮಿಸಿದೆ. ಈ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದ ಅವರು ಸೋಮವಾರ ಕೊಟ್ಟಾರದಲ್ಲಿರುವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಆಕಾಶ್ ಶಂಕರ್, ಪ್ರಕರಣದ ಸತ್ಯಾಸತ್ಯತೆ ಅರಿಯಲು ಸಭೆ ನಡೆಸಿದ್ದೇನೆ. ಹಂತಹಂತವಾಗಿ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾಹಿತಿ ಪಡೆದು, ತನಿಖೆ ನಡೆಸಲಿದ್ದೇನೆ. ವಿಚಾರಣೆ ನಡೆಯುತ್ತಲೇ ಇದೆ. ಪ್ರಾಥಮಿಕ ಹಂತದಲ್ಲಿ ವಿಚಾರಣೆ ಕುರಿತಂತೆ ಏನೇ ವಿಚಾರವನ್ನು ಹೇಳಲಾಗುವುದಿಲ್ಲ. ಆದಷ್ಟು ಶೀಘ್ರದಲ್ಲಿ ಸರಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದೇನೆ. ಪ್ರಾಮಾಣಿಕ ವಾಗಿ ಈ ತನಿಖೆ ನಡೆಸಲಿದ್ದೇನೆ ಎಂದು ಹೇಳಿದರು.