ಮಂಗಳೂರು: 30ವರ್ಷಗಳ ಹಿಂದೆ ಮೃತಪಟ್ಟ ಯುವತಿಗೆ ಮದುವೆ ಮಾಡಿಸಲು ‘ಪ್ರೇತವರ’ ಬೇಕಾಗಿದೆ..! ಅಚ್ಚರಿ ಮೂಡಿಸಿದ ಹೀಗೊಂದು ಜಾಹೀರಾತು

ಮಂಗಳೂರು: ಸಾಮಾನ್ಯವಾಗಿ ಪ್ರಾಯಕ್ಕೆ ಬಂದ ಹುಡುಗ ಹುಡುಗಿಗೆ ಸರಿಯಾದ ಸಂಬಂಧ ಕೂಡಿ ಬರದೇ ಜಾಹೀರಾತಿನ ಮೊರೆ ಹೋಗುವುದುಂಟು.
ಆದರೆ ಕರಾವಳಿಯಲ್ಲಿ ಈ ಪೇಪರ್ ಜಾಹೀರಾತು ಕಟ್ಟಿಂಗ್ ಭಾರೀ ವೈರಲ್ ಆಗುತ್ತಿದೆ. ಜಾಹಿರಾತಿನಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಮೃತಪಟ್ಟ ಯುವತಿಗೆ ಮದುವೆ ಮಾಡಿಸಲು ಪ್ರೇತವರ ಬೇಕೆನ್ನಲಾಗಿದೆ. ಈ ಜಾಹೀರಾತು ನೋಡಿ ಜನ ಅಚ್ಚರಿಗೊಂಡಿದ್ದಾರೆ.

ಜಾಹಿರಾತಿನಲ್ಲಿ ಏನಿದೆ?: 30 ವರ್ಷಗಳ ಹಿಂದೆ ಮೃತಪಟ್ಟ ಹೆಣ್ಣುಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷದ ಹಿಂದೆ ತೀರಿ ಹೋದ ಗಂಡುಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ ಸಂಪರ್ಕಿಸಿ’ ಎನ್ನಲಾಗಿತ್ತು. ತಮಗೆ ಬೇಕಾದ ಸಂಬಂಧ ಕೂಡದೇ ಇದ್ದದ್ದರಿಂದ ಮೃತಪಟ್ಟ ಮಗುವಿನ ಕುಟುಂಬಸ್ಥರು ಜಾಹೀರಾತು ಮೊರೆಹೋಗಿರಬಹುದು ಎನ್ನಲಾಗಿದೆ.

ಸದ್ಯ ಈ ಜಾಹೀರಾತು ಕಟ್ಟಿಂಗ್ ಭಾರೀ ವೈರಲ್ ಆಗುತ್ತಿದೆ. ಜಾಹಿರಾತು ನೀಡಿದವರಿಗೆ ಒಂದಷ್ಟು ಪ್ರತಿಕ್ರಿಯೆಗಳು ಬಂದಿದೆ ಎನ್ನಲಾಗಿದೆ.

ಜಾಹೀರಾತು ನೀಡಿದ್ದು ಯಾಕೆ: ಮದುವೆಯಾಗದೇ ಹೆಣ್ಣು ಅಥವಾ ಗಂಡು ಮೃತಪಟ್ಟರೆ ಅವರಿಗೆ ಸದ್ಗತಿಯಿಲ್ಲ ಎಂಬುದು ತುಳುವರ ಬಲವಾದ ನಂಬಿಕೆಯಂತೆ. ಆದ್ದರಿಂದ ಅದೃಶ್ಯರೂಪದಲ್ಲಿ ತಮ್ಮ ಕುಟುಂಬದೊಂದಿಗೆ ಸದಾಕಾಲ ಜೀವಿಸುತ್ತಿರುವ ಅವಿವಾಹಿತರಿಗೆ ಮದುವೆಯ ಸಂಸ್ಕಾರಕ್ಕಾಗಿ ಪ್ರೇತಮದುವೆ ಮಾಡಿಸಲಾಗುತ್ತದೆ‌. ಆದ್ದರಿಂದ ಮದುವೆಯಾಗದೆ ಸತ್ತವರು ಪ್ರಾಯಪ್ರಬುದ್ಧವಾಗುವ ಹೊತ್ತಿಗೆ ತಮ್ಮ ಇತರ ಜೀವಂತ ಮಕ್ಕಳಂತೆ ಆ ಮಗುವಿನ ಮದುವೆಯ ಬಗ್ಗೆಯೂ ಕುಟುಂಬಸ್ಥರು ಚಿಂತನೆ ಮಾಡುತ್ತಾರೆ‌. ಕೆಲವೊಂದು ಕಡೆಗಳಲ್ಲಿ ಗತಿಸಿದವರೇ ತಮ್ಮ ಮದುವೆಯ ಬಗ್ಗೆ ಕುಟುಂಬದವರಿಗೆ ತೊಂದರೆ ನೀಡಿ ನೆನಪಿಸೋದು ಇದೆ ಎಂದು ಹೇಳಲಾಗುತ್ತದೆ.

ಆದ್ದರಿಂದ ಕುಟುಂಬಸ್ಥರು ಜಾತಿ, ಬಳಿ ನೋಡಿ ಹೆಣ್ಣು – ಗಂಡು ಒಪ್ಪಿಗೆಯಾಗಿ ಕೂಡಾವಳಿ ಆದಲ್ಲಿ ಪ್ರೇತಮದುವೆ ಮಾಡಿಸುತ್ತಾರೆ. ಮದುವೆಯೆಂದರೆ ಇದು ಕಾಟಾಚಾರದ ಮದುವೆಯಲ್ಲ. ಜೀವಂತ ಇರುವವರ ಮದುವೆಯ ರೀತಿಯಲ್ಲಿಯೇ ಹೆಣ್ಣು – ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ನಿಶ್ಚಿತಾರ್ಥ, ಮದುವೆ ದಿನ ವರನ ಮನೆಗೆ ದಿಬ್ಬಣ ಬರುವುದು, ಹೆಣ್ಣಿಗೆ ಸೀರೆ, ರವಕೆ, ಕರಿಮಣಿ, ಕಾಲುಂಗುರ, ಬಳೆ, ಗಂಡಿಗೆ ಪಂಚೆ, ಶರ್ಟ್ ಸಿದ್ಧಪಡಿಸಿ ಶಾಸ್ತ್ರಬದ್ಧವಾಗಿಯೇ ಮದುವೆಯಾಗುತ್ತದೆ‌. ಧಾರೆಯ ಬಳಿಕ ಸೇರಿದವರಿಗೆ ಮದುವೆಯ ಊಟವನ್ನು ಬಡಿಸಲಾಗುತ್ತದೆ‌. ಸಾಧಾರಣ ಪ್ರೇತಮದುವೆ ಆಷಾಢ ತಿಂಗಳ ರಾತ್ರಿ ವೇಳೆ ನಡೆಯುವುದು ಸಂಪ್ರದಾಯ.

ಒಟ್ಟಿನಲ್ಲಿ ಈ ಜಾಹಿರಾತು ಕಟ್ಟಿಂಗ್ ತುಳುನಾಡಿನ ಆಚರಣೆಯ ಬಗ್ಗೆ ಮತ್ತೆ ಚರ್ಚೆಯಾಗುವಂತೆ ಮಾಡಿದೆ.

Latest Indian news

Popular Stories