ಮಂಗಳೂರು: ರಜೆ ವಿಚಾರವಾಗಿ ನಿರಂತರ ಕರೆಗೆ ಹೈರಾಣಾದ ಜಿಲ್ಲಾಧಿಕಾರಿ | ನಕಲಿ ಅದೇಶ ಪ್ರತಿಯ ವಿರುದ್ಧ FIR ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಕಳೆದ ಕೆಲ ದಿನಗಳಿಂದ ಭಾರೀ ಮಳೆ, ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯಾನುಸಾರ ಶಾಲಾ ಕಾಲೇಜುಗಳಿಗೆ ರಜೆ ನೀಡುತ್ತಾ ಬರಲಾಗಿತ್ತು. ಈ ನಡುವೆ ರಜೆ ವಿಚಾರವಾಗಿ ಹಲವಾರು ಮಂದಿ ತಡರಾತ್ರಿ ಮತ್ತು ಬೆಳ್ಳಂಬೆಳಗ್ಗೆ ನಿರಂತರ ಕರೆ ಮಾಡುತ್ತಿದ್ದು, ನಿಮಿಷವೊಂದಕ್ಕೆ 7ರಿಂದ 8 ಕರೆಗಳು ಬರುತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮಹಿಲನ್ ಹೇಳಿದ್ದಾರೆ.
ಜಿಲ್ಲಾಡಳಿತದ ಅಧಿಕೃತ ಮೊಬೈಲ್ ಸಂಖ್ಯೆಯನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗಿದ್ದು, ಈ ರೀತಿಯ ಕರೆಗಳ ತಡೆಯಲು ಪರಿಣಾಮಕಾರಿ ಪ್ರಯತ್ನ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕರೆ ಮಾಡುತ್ತಿರುವವರ ಪೈಕಿ ಕೆಲವರು ವಿದ್ಯಾರ್ಥಿಗಳೂ ಆಗಿರುವುದಿಲ್ಲ. ಇಂತಹ ಅನಗತ್ಯ ಕರೆಗಳಿಂದಾಗಿ ಮಳೆಯ ತುರ್ತು ಸಂದರ್ಭದಲ್ಲಿಯೂ ಬಹಳಷ್ಟು ತೊಂದರೆಗಳಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಇದು ಮಕ್ಕಳು, ವಿದ್ಯಾರ್ಥಿಗಳು ಮಾಡುತ್ತಿರುವುದರಿಂದಾಗಿ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಕೆಯಾಗುತ್ತಿದೆ ಎಂದು ಹೇಳಿದ ಜಿಲ್ಲಾಧಿಕಾರಿ, ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಜುಲೈ 18ರಂದು ರಜೆ ಇರುವುದಾಗಿ ನಕಲಿ ಪತ್ರವೊಂದು ಹರಿದಾಡುತ್ತಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಹಿಂದಿನ ಆದೇಶವನ್ನು ಎಡಿಟ್ ಮಾಡಿ, ಜೂನ್ 18 ಎಂದು ತಿದ್ದಲಾಗಿದೆ. ಇದನ್ನು ಸೃಷ್ಟಿಸಿದವರ ಮೇಲೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚುವವರ ವಿರುದ್ಧ ಎಫ್.ಐ.ಆರ್. ದಾಖಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.