ಕೊಣಾಜೆ : ಶಾಲೆಯಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಪ್ರಾಣಾಪಾಯಕ್ಕೆ ಸಿಲುಕಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಸಹಪಾಠಿ ವಿದ್ಯಾರ್ಥಿನಿಯೊಬ್ಬಳು ಸಮಯ ಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ಮುಡಿಪು ಸಮೀಪದ ಇರಾ ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ ಇತ್ತೀಚೆಗೆ ನಡೆದಿರುವುದು ವರದಿಯಾಗಿದೆ.
5ನೇ ತರಗತಿಯ ವಿದ್ಯಾರ್ಥಿನಿ ಫಾತಿಮತುಲ್ ಅಶ್ಫಿಯಾ ತನ್ನ ಸಹಪಾಠಿಯನ್ನು ರಕ್ಷಿಸಿದ ಸಾಹಿಸಿ.
ಜೂ.14ರಂದು ಇರಾ ಸರಕಾರಿ ಶಾಲೆಯಲ್ಲಿ ಈ ಘಟನೆ ನಡದಿದೆ. 5ನೇ ತರಗತಿ ವಿದ್ಯಾರ್ಥಿನಿ ಶರಫೀಯ ಮಧ್ಯಾಹ್ನ ಊಟದ ಸಮಯದಲ್ಲಿ ಫ್ಯಾನ್ ಸ್ವಿಚ್ ಹಾಕಲು ಮುಂದಾದಾಗ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾಳೆ. ಇದನ್ನು ತಕ್ಷಣ ಗಮನಿಸಿದ ಆಕೆಯ ಸಹಪಾಠಿ ಫಾತಿಮತುಲ್ ಅಶ್ಫಿಯಾ ಸಮಯ ಪ್ರಜ್ಞೆ ಮೆರೆದು ಊಟಕ್ಕಾಗಿ ಕೈಯಲ್ಲಿ ಹಿಡಿದಿದ್ದ ತನ್ನ ಬಟ್ಟಲನ್ನು ಗೆಳತಿಯ ಕೈಗೆ ಎಸೆದಿದ್ದಾಳೆ. ಇದರಿಂದ ಶರಫೀಯಳ ಕೈ ವಿದ್ಯುತ್ ಸ್ವಿಚ್ ನಿಂದ ಸಂಪರ್ಕ ಕಡಿತಗೊಂಡಿದೆ. ಈ ರೀತಿ ಶರಫೀಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ವಿದ್ಯುತ್ ಆಘಾತದಿಂದ ಶರಫೀಯಳ ಕೈಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿರುವ ಇರಾ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸೋನಿಕಾ, “ಶಾಲೆಯ ಮಧ್ಯಾಹ್ನದ ಊಟದ ವೇಳೆಯಲ್ಲಿ ಶರಫೀಯ ಎಂಬ 5ನೇ ತರಗತಿಯ ವಿದ್ಯಾರ್ಥಿನಿಗೆ ವಿದ್ಯುತ್ ಶಾಕ್ ತಗುಲಿದೆ. ಇದನ್ನು ಗಮನಿಸಿದ ಆಕೆಯ ಸಹಪಾಠಿ ಫಾತಿಮತುಲ್ ಅಶ್ಫಿಯಾ ತನ್ನ ಕೈಯಲ್ಲಿದ್ದ ಬಟ್ಟಲು ಎಸೆದು ಆಕೆಯನ್ನು ಶಾಕ್ ನಿಂದ ರಕ್ಷಣೆ ಮಾಡಿದ್ದಾಳೆ” ಎಂದು ತಿಳಿಸಿದ್ದಾರೆ.
ಫಾತಿಮತುಲ್ ಅಶ್ಫಿಯಾ ಇರಾ ಗ್ರಾಮದ ಮುಜೀಬ್ ರಹ್ಮಾನ್ ಮತ್ತು ಲುಬಾಬಾತ್ ದಂಪತಿಯ ಪುತ್ರಿ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ಫಿಯಾಳ ತಂದೆ ಮುಜೀಬ್ ರಹ್ಮಾನ್, “ಮಗಳು ಶಾಲೆಗೆ ಬಂದು ವಿದ್ಯುತ್ ಶಾಕ್ ತಗುಲಿದ್ದ ಬಾಲಕಿಯ ರಕ್ಷಣೆ ಮಾಡಿದ್ದನ್ನು ತಿಳಿಸಿದ್ದಳು. ಆಕೆಯ ಸಾಹಸಕ್ಕೆ ಹೆಮ್ಮೆಯಿದೆ” ಎಂದರು.