ಮಂಗಳೂರು: ತಡೆಗೋಡೆ ಕುಸಿದು ನಾಲ್ವರು ಮೃತಪಟ್ಟ ಕುತ್ತಾರ್ ಮದನಿ ನಗರದ ಮನೆಗೆ ಬುಧವಾರ ಸಂಜೆ ವೇಳೆ ಕಂದಾಯ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದುರಂತದ ಬಗ್ಗೆ ಸಚಿವರಿಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕ್ಷೇತ್ರದ ಶಾಸಕ ಹಾಗೂ ಸ್ಪೀಕರ್ ಯು.ಟಿ.ಖಾದರ್, ಸ್ಥಳೀಯರು ಮಾಹಿತಿ ನೀಡಿದರು. ದುರಂತ ನಡೆದ ಮನೆಯ ಹಿರಿಯ ಪುತ್ರಿ ಹಾಗೂ ಕುಟುಂಬಸ್ಥರಿಗೆ ಕೃಷ್ಣಭೈರೇಗೌಡ ಸಾಂತ್ವನ ತಿಳಿಸಿದರು.
ಬಳಿಕ ಮಾತನಾಡಿದ ಅವರು, ದುರಂತ ನಡೆದ ಮನೆಯ ಕುಟುಂಬಸ್ಥರಿಗೆ ಆದಷ್ಟು ಶೀಘ್ರದಲ್ಲೇ ಸರಕಾರದಿಂದ ಪರಿಹಾರ ಕೊಡುವ ಸೂಚನೆ ನೀಡಿದ್ದೇನೆ ಎಂದರು.
ಅಲ್ಲದೇ ಪ್ರತೀ ಗ್ರಾಪಂಗಳಲ್ಲಿ ಈ ರೀತಿಯ ಸಮಸ್ಯೆಗಳಿಗೆ ಸಿಲುಕಿಕೊಳ್ಳುವ ಮನೆಗಳು ಎಷ್ಟಿವೆ ಎಂದು ಡಿಸಿಯವರಿಗೆ ಸರ್ವೇ ಮಾಡಲು ಸೂಚಿಸಿದ್ದೇನೆ. ಅಂತಹ ಮನೆಗಳ ಕುಟುಂಬಸ್ಥರಿಗೆ ಸರಕಾರದಿಂದ ಎಚ್ಚರಿಕೆ ಕೊಡಲಾಗುತ್ತದೆ. ಅಧಿಕ ಮಳೆಯ ವೇಳೆ ತೊಂದರೆ ಸಂಭವಿಸಬಹುದಾದ ಮನೆಗಳ ಮಂದಿ ಆ ಸಂದರ್ಭ ಅಲ್ಲಿ ಇರದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.