ಮಂಗಳೂರು: ತನ್ನ ವಾರ್ಡ್‌ನ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರೊಬ್ಬರು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದನ ಬಾವಿಗಿಳಿದು ಪ್ರತಿಭಟಿಸಿದ ಘಟನೆ ನಡೆದಿದೆ.
ಮನಪಾ ಸಾಮಾನ್ಯ ಸಭೆಯಲ್ಲಿ ಬೆಂದೂರ್‌ವೆಲ್ ವಾರ್ಡ್‌ನ ಕಾಂಗ್ರೆಸ್ ಕಾರ್ಪೊರೇಟರ್ ನವೀನ್ ಡಿಸೋಜಾ ಅವರು ಸದನದ ಬಾವಿಯಲ್ಲಿ ಮಲಗಿ ಹೈಡ್ರಾಮಾ ಮಾಡಿದ್ದಾರೆ.
ಜಲಸಿರಿ ಯೋಜನೆಯಲ್ಲಿ 24×7 ಕುಡಿಯುವ ನೀರು ಪೂರೈಕೆಗೆ ಬೆಂದೂರ್ ವೆಲ್ ವಾರ್ಡ್ ನಲ್ಲಿ ಪೈಲಟ್ ಪ್ರಾಜೆಕ್ಟ್ ಜಾರಿಯಾಗಿತ್ತು. ಆದರೆ ಈ ಪ್ರಾಜೆಕ್ಟ್ ಬರುವ ಮೊದಲು ತಮ್ಮ ವಾರ್ಡ್ ನಲ್ಲಿ ದಿನಕ್ಕೆ 10ಗಂಟೆ ನೀರು ಬರುತ್ತಿದ್ದರೆ, ಈಗ ಕನಿಷ್ಠ ಪಕ್ಷ ಒಂದು ಗಂಟೆಯೂ ನೀರು ಬರುತ್ತಿಲ್ಲ. ತಕ್ಷಣ ಇದಕ್ಕೆ ಪರಿಹಾರ ಸೂಚಿಸಿ ಎಂದು ಕಾರ್ಪೊರೇಟರ್ ನವೀನ್ ಡಿಸೋಜಾ ಸದನದ ಬಾವಿಗಿಳಿದು ಮಲಗಿದರು. ಇದರಿಂದಾಗಿ ಸಾಮಾನ್ಯ ಸಭೆಯಲ್ಲಿ ಕೆಲಹೊತ್ತು ಹೈಡ್ರಾಮ ನಡೆಯಿತು.
ಫೆಬ್ರವರಿ 8ರಂದು ಈ ಬಗ್ಗೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ನೇತೃತ್ವದಲ್ಲಿ ಸಭೆ ನಡೆದು ಆ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ಕಾರ್ಪೊರೇಟರ್ ನವೀನ್ ಡಿಸೋಝಾ ಸದನದ ಬಾವಿಯಿಂದ ಎದ್ದು ಬಂದರು.