ಮಂಗಳೂರು: ಸಾವಿನಲ್ಲೂ ಸಾರ್ಥಕತೆ; ಯುವತಿಯ ಅಂಗಾಂಗ ದಾನ

ಮಂಗಳೂರು: ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಯುವತಿಯ ಅಂಗಾಂಗಗಳನ್ನು ದಾನ ನೀಡುವ ಮೂಲಕ ಕುಟುಂಬವೊಂದು ನೋವಿನಲ್ಲೂ ಸಾರ್ಥಕತೆ ಮೆರೆದಿದೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಬಜಪೆ ಪಡು ಪೆರಾರ ನಿವಾಸಿ ಗ್ಲೋರಿಯಾ ಆಶಾ ರೊಡ್ರಿಗಸ್ ಫುಡ್ ಅಲರ್ಜಿ (ಅನಾಫೆಲಾಕ್ಟಿಕ್ ರಿಯಾಕ್ಷನ್) ತೊಂದರೆಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಇತ್ತೀಚೆಗೆ ದಾಖಲಾಗಿದ್ದರು. ಈ ವೇಳೆ ಗ್ಲೋರಿಯಾ ಕೋಮಾಗೆ ಹೋಗಿದ್ದು, ಚಿಕಿತ್ಸೆ ಸ್ಪಂದಿಸದೆ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಗ್ಲೋರಿಯಾ ಕುಟುಂಬಸ್ಥರಿಗೆ ತಿಳಿಸಿ ಅಂಗಾಂಗ ದಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಗಳ ಸಾವಿನ ನೋವಿನಲ್ಲಿದ್ದರೂ ಗ್ಲೋರಿಯಾ ಕುಟುಂಬ ತನ್ನ ಮಗಳಿಂದ ಇತರರು ಮರು ಜೀವ ಪಡೆಯಲಿದೆ ಎಂದು ಅಂಗಾಂಗದಾನಕ್ಕೆ ಒಪ್ಪಿದ್ದಾರೆ.
ಫಾದರ್ ಮುಲ್ಲರ್ ಆಸ್ಪತ್ರೆಯ ಮೂಲಕ ಗ್ಲೋರಿಯಾ ಅವರ ಅಂಗಾಂಗಗಳನ್ನು ವಿವಿಧ ಆಸ್ಪತ್ರೆಯ ಸ್ವೀಕೃತದಾರಿಗೆ ನೀಡಿದೆ. ಇದರಂತೆ ಪಿತ್ತಜನಕಾಂಗ ಮಂಗಳೂರಿನ ಎಜೆ ಆಸ್ಪತ್ರೆಗೆ, ಶ್ವಾಸಕೋಶ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ, ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಕಿಡ್ನಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ, ಚರ್ಮ ಮತ್ತು ಕಾರ್ನಿಯಾ ಫಾದರ್ ಮುಲ್ಲರ್ ಆಸ್ಪತ್ರೆಗೆ ಯಶಸ್ವಿಯಾಗಿ ಒದಗಿಸಲಾಗಿದೆ ಎಂದು ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಉದಯ್ ಕುಮಾರ್ ಮಾಹಿತಿ ನೀಡಿದ್ದಾರೆ.