ಮಂಗಳೂರು: ಕಿಟಕಿಯ ಗ್ರಿಲ್ಸ್ ಕತ್ತರಿಸಿ ಮನೆಯೊಂದರಿಂದ ಕಳ್ಳತನ ನಡೆಸಿದ ಘಟನೆ ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್‌ನಲ್ಲಿ ನಡೆದಿದೆ.
ಶನಿವಾರ ಮಧ್ಯರಾತ್ರಿ ಮನೆಯವರು ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿ ಗಳ ಗ್ಯಾಂಗ್ ಒಂದು ಮನೆಯ ಕೊಠಡಿಯ ಕಿಟಕಿಯ ಗ್ರಿಲ್ ಅನ್ನು ಕತ್ತರಿಸಿ ಕಳ್ಳತನ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕೋಡಿಕಲ್ ವಿವೇಕಾನಂದ ನಗರವಾಸಿ ಪ್ರದೀಪ್ ರವರ ಮನೆಯ ಕೊಠಡಿಯ ಕಿಟಕಿಯ ಸರಳನ್ನು ಕತ್ತರಿಸಿ ಒಳಬಂದ ಕಳ್ಳರು ರೂಮಿನಲ್ಲಿದ್ದ ಗಾಡ್ರೆಜ್ ನಲ್ಲಿ ಇಟ್ಟಿದ್ದ 10,000 ರೂ ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಷ್ಕರ್ಮಿಗಳು ಮಧ್ಯಪ್ರದೇಶ, ಹೈದರಾಬಾದ್ ಮೂಲದವರಾಗಿದ್ದು, ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು. ಶಂಕಿತ ವ್ಯಕ್ತಿಗಳು ಪರಿಸರದಲ್ಲಿ ಅಥವಾ ಆಸು ಪಾಸಿನಲ್ಲಿ ಕಂಡುಬಂದಲ್ಲಿ ಪೊಲೀಸ್ ಕಂಟ್ರೋಲ್ ನಂಬರ್ 9480802321 ಗೆ ಅಥವಾ 112 ಗೆ ಮಾಹಿತಿ ನೀಡುವುದು ಅಲ್ಲದೆ ಮನೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಹಾಗೂ ಪ್ರವೇಶ ದಾರಿ ಕಾಣುವ ಹಾಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಮತ್ತು ಅವುಗಳು ಸುಸ್ಥಿತಿಯಲ್ಲಿರುವ ಬಗ್ಗೆ, ರಾತ್ರಿಯ ದೃಶ್ಯಗಳು ಸರಿಯಾಗಿ ಕಾಣುವ ಹಾಗೆ ಸಿಸಿಟಿವಿಯನ್ನು ಅಳವಡಿಸಬೇಕು ಎಂದು ಪೋಲೀಸರು ಮನವಿ ಮಾಡಿದ್ದಾರೆ.