ಮಂಗಳೂರು: ಮಗು ಅಪಹರಣ ಪ್ರಕರಣ: ಮೂವರು ಆರೋಪಿಗಳಿಗೆ 10 ವರ್ಷ ಜೈಲು, ₹5,000 ದಂಡ

ಮಂಗಳೂರು: ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು 2013ರ ಮಗು ಅಪಹರಣ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ತಲಾ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹5,000 ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿ 6 ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ವಿವರ:
ದಿನಾಂಕ 26.07.2013 ರಂದು ಸಂಜೆ 6:30ರ ಸುಮಾರಿಗೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟಿನ ಚಿಲ್ಡ್ರನ್ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳಾದ ಲಿನೆಟಾ ವೇಗಸ್, ರಂಗವ್ವ ಮತ್ತು ಜೊಸ್ಸಿ ವೇಗಸ್ ಕ್ಲಿನಿಕ್‌ಗೆ ಪ್ರವೇಶಿಸಿದ್ದರು. ಆರೋಪಿ ರಂಗವ್ವ ತನ್ನ ಎರಡೂವರೆ ತಿಂಗಳ ಮಗುವಾದ ಅನಿಶಾಳನ್ನು ಹಿಡಿದುಕೊಂಡಿದ್ದರು. ಲಿನೆಟಾ ವೇಗಸ್, ಮಗುವಿನ ಮೂಲ ತಾಯಿ ರಂಗವ್ವ ಅಲಿಯಾಸ್ ಗೀತಾ ಎಂದು ವಿದ್ಯಾ ದಿನಕರ್‌ಗೆ ತಿಳಿಸಿ, ₹90,000 ನೀಡಿ ಮಗುವನ್ನು ಪಡೆದುಕೊಳ್ಳುವುದಾಗಿ ಹೇಳಿದ್ದರು. ಉಳಿದ ಹಣವನ್ನು ಮರುದಿನ ನೀಡುವುದಾಗಿ ತಿಳಿಸಿದ್ದರು. ಇದೇ ಸಂದರ್ಭದಲ್ಲಿ, ವಿದ್ಯಾ ದಿನಕರ್‌ರವರಿಗೆ ₹2 ಲಕ್ಷ ನೀಡಬೇಕೆಂದು ಹೇಳಿ, ಅನಿಶಾ ಎಂಬ ಮಗುವನ್ನು ಅವರ ಕೈಗೆ ಕೊಟ್ಟು ಮಾರಾಟ ಮಾಡಿದ್ದರು. ನಾಲ್ಕನೇ ಆರೋಪಿ ಲೂಸಿ ವೇಗಸ್, ಕುಮಾರಿ ರೆಹನಾ ಅವರೊಂದಿಗೆ ಮಗು ಮಾರಾಟದ ಬಗ್ಗೆ ಮಾತುಕತೆ ನಡೆಸಿ, ಇತರ ಆರೋಪಿಗಳೊಂದಿಗೆ ಸೇರಿ ಈ ಅಪರಾಧಕ್ಕೆ ಸಹಕರಿಸಿದ್ದರು.
ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 370(4) ಜೊತೆಗೆ ಕಲಂ 34 ರ ಅಡಿಯಲ್ಲಿ ಅಪರಾಧ ಎಸಗಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಮಗುವಿನ ತಾಯಿ ಆರೋಪಿ ರಂಗವ್ವ ಮೃತಪಟ್ಟಿದ್ದರು.

ನ್ಯಾಯಾಲಯದ ತೀರ್ಪು:
ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ವಿಶೇಷ) ನ್ಯಾಯಾಲಯವು ದಿನಾಂಕ 30.06.2025 ರಂದು ಮೂವರು ಆರೋಪಿಗಳು ಭಾ.ದಂ.ಸಂ ಕಲಂ 370(4) ಸಹ ಕಲಂ 34 ರ ಅಡಿಯಲ್ಲಿ ಅಪರಾಧ ಎಸಗಿರುವುದಕ್ಕೆ ತೀರ್ಪು ನೀಡಿತ್ತು. ದಿನಾಂಕ 03.07.2025 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಯಿತು.

ಈ ಪ್ರಕರಣದಲ್ಲಿ ಮಗು ಮಾರಾಟದಿಂದ ಬಂದ ₹94,325 ಹಾಗೂ ಆರೋಪಿ ಲಿನೆಟಾ ವೇಗಸ್‌ರವರ 5 ಮೊಬೈಲ್‌ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ. ಲಿನೆಟಾ ವೇಗಸ್ ಇವುಗಳನ್ನು ಮಧ್ಯಂತರ ವಶಕ್ಕೆ ಪಡೆದುಕೊಂಡಿದ್ದು, ದಿನಾಂಕ 31.07.2025 ರೊಳಗೆ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶಿಸಲಾಗಿದೆ.

Latest Indian news

Popular Stories