ಮಂಗಳೂರು: ಬಾಲಕಿಯೊಂದಿಗೆ ಅಸಭ್ಯ ವರ್ತನೆ: ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಗೆ ಜೈಲು ಶಿಕ್ಷೆ, ದಂಡ

ಮಂಗಳೂರು: ಬಸ್ಸಿನಲ್ಲಿ ಅಪ್ರಾಪ್ತೆ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್‌ಟಿಎಸ್‌ಸಿ-1 ಪೊಕ್ಸೊ)‌
ಕೆ‌ಎಸ್‌ಆರ್‌ಟಿಸಿ ಬಸ್ ಕಂಡೆಕ್ಟರ್ ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬಾಗಲಕೋಟೆ ನಿವಾಸಿ ದಾವಲ್ ಸಾಬ್ (34) ಶಿಕ್ಷೆಗೊಳಗಾದ ಆರೋಪಿ.

2023ರ ಮಾರ್ಚ್‌ನಲ್ಲಿ ಘಟನೆ ನಡೆದಿದ್ದು, ಬಾಲಕಿ ಶಾಲೆಯಿಂದ ಬಿ.ಸಿ.ರೋಡ್‌ನಲ್ಲಿರುವ ತನ್ನ ಮನೆಗೆ ಮರಳಲು ಕಲ್ಲಡ್ಕದಲ್ಲಿ ಸರಕಾರಿ ಬಸ್ ಹತ್ತಿದ್ದಾಳೆ. ಈ ವೇಳೆ ಬಸ್‌ನಲ್ಲಿ 4-5 ಮಂದಿ ಮಾತ್ರ ಪ್ರಯಾಣಿಕರಿದ್ದರು. ಮುಂದಿನ ನಿಲ್ದಾಣದಲ್ಲಿ ಅವರೆಲ್ಲಾ ಬಸ್‌ನಿಂದ ಇಳಿದಿದ್ದಾರೆ. ಆಗ ಆರೋಪಿ ಕಂಡೆಕ್ಟ‌ರ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ತಾನು ಹೆತ್ತವರು, ಪೊಲೀಸರಿಗೆ ತಿಳಿಸುವುದಾಗಿ ಬಾಲಕಿ ಹೇಳಿದರೂ ಆರೋಪಿ ಅಸಭ್ಯತನ ಮುಂದುವರಿಸಿದ್ದ. ಇದರಿಂದ ನೊಂದ ಬಾಲಕಿ ಬಸ್‌ನ ಸಂಖ್ಯೆ ಸಮೇತ ಮನೆಗೆ ತೆರಳಿ ತಾಯಿ ಬಳಿ ಘಟನೆಯ ಬಗ್ಗೆ ವಿವರಿಸಿದ್ದಾಳೆ. ತಾಯಿ ಮತ್ತು ಬಾಲಕಿಯು ಬಂಟ್ವಾಳ ನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಕಂಡೆಕ್ಟರ್‌ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾದೆ.

ಈ ಬಗ್ಗೆ ಇನ್‌ ಸ್ಪೆಕ್ಟರ್ ನಂದಿನಿ ಎಸ್.ಶೆಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್‌ಟಿಎಸ್‌ಸಿ-1 ಪೊಕ್ಸೊ)ದ ನ್ಯಾಯಾಧೀಶೆ ಮಂಜುಳಾ ಇಟ್ಟಿ ವಾದ – ವಿವಾದವನ್ನು ಆಲಿಸಿ ಶುಕ್ರವಾರ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಐಪಿಸಿ ಕಲಂ 509ರಡಿ ಆರೋಪಿಗೆ 1 ವರ್ಷ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ ಒಂದು ತಿಂಗಳು ಸಜೆ, ಪೊಕ್ಸೊ ಕಾಯ್ದೆಯ ಕಲಂ 12ರಡಿ 2 ವರ್ಷ ಕಠಿಣ ಸಜೆ ಮತ್ತು 10,000 ರೂ.ದಂಡ, ದಂಡ ಪಾವತಿಸದಿದ್ದರೆ ಮತ್ತೆ 2 ತಿಂಗಳು ಸಜೆ ವಿಧಿಸಿದ್ದಾರೆ. ಅಲ್ಲದೆ ಸಂತ್ರಸ್ತೆಗೆ 10,000 ರೂ.ಗಳನ್ನು ಪರಿಹಾರವಾಗಿ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.

Latest Indian news

Popular Stories