ಮಂಗಳೂರು: ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಭುಗಿಲೆದ್ದ ಕಾರ್ಯಕರ್ತರ ಆಕ್ರೋಶ: ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು

ಮಂಗಳೂರು: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಈ ಬಾರಿಬಗೆಲುವಿನ ನಿರೀಕ್ಷೆಯಲ್ಲಿದ್ದ ಜಿಲ್ಲೆಯಲ್ಲಿ ಸೋಲಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರ ನಿರುತ್ಸಾಹವೇ ಕಾರಣ ಎಂದು ಕೆಲ ಕಾರ್ಯಕರ್ತರು ಆರೋಪಿಸಿದ್ದಾರೆ.


ಹರೀಶ್ ಕುಮಾರ್ ಬಿಲ್ಲವ ಸಮುದಾಯದ ವ್ಯಕ್ತಿಯಾಗಿದ್ದು, ಜಿಲ್ಲೆಯಲ್ಲಿ ಬಿಲ್ಲವರು ನಿರ್ಣಾಯಕ ಮತದಾರರಾಗಿದ್ದಾರೆ. ಆದರೂ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸಲಾಗದ ಹರೀಶ್ ಕುಮಾರ್ ಈ ಹುದ್ದೆಯಲ್ಲಿ ಮುಂದುವರಿಯುವುದು ಸೂಕ್ತವೇ ಎಂದು ಕಾರ್ಯಕರ್ತರು ಪ್ರಶ್ನಿಸತೊಡಗಿದ್ದಾರೆ.
ಹರೀಶ್ ಕುಮಾರ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿದಂದಿನಿಂದ ಕಾಂಗ್ರಸ್ ಜಿಲ್ಲೆಯಲ್ಲಿ ಯಾವುದೇ ಚುನಾವಣೆಯಲ್ಲೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ 8ರಲ್ಲಿ 1ಸ್ಥಾನವನ್ನಷ್ಟೇ ಗೆದ್ದಿತ್ತು. ಆದರೂ ಹರೀಶ್ ಕುಮಾರ್‌ಗೆ ವಿಧಾನ ಪರಿಷತ್ ಸ್ಥಾನ ನೀಡಲಾಗಿತ್ತು.


2019ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. ಪಕ್ಷ ಸಂಘಟನೆಗೆ, ಅಭ್ಯರ್ಥಿಗಳ ಗೆಲುವಿಗೆ ಹರೀಶ್ ಕುಮಾರ್ ಕೊಡುಗೆ ಶೂನ್ಯ ಎಂದು ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.


ಇದೀಗ ಈ ಚುನಾವಣೆಯಲ್ಲಿಯದರೂ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ಪಕ್ಷದ ಸೋಲಿಗೆ ಹರೀಶ್ ಕುಮಾರ್‌ರನ್ನೇ ಹೊಣೆ ಮಾಡಿದ್ದು, ರಾಜೀನಾಮೆ ಗೆ ಒತ್ತಾಯಿಸಿದ್ದಾರೆ.
ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡದಿದ್ದರೆ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈಗಾಗಲೇ ಆಕ್ರೋಶಿತ ಕಾರ್ಯಕರ್ತರು ಈ ಕುರಿತಾಗಿ ವಾಟ್ಸಪ್ ಗ್ರೂಪ್ ಮಾಡಿದ್ದಾರೆಂದು ಹೇಳಲಾಗುತ್ತದೆ. ಅಲ್ಲದೇ ಹರೀಶ್ ಕುಮಾರ್ ಗೆ ಕರೆ ಮಾಡಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ.


ಅಲ್ಲದೇ ಜಿಲ್ಲಾಧ್ಯಕ್ಷ ಸ್ಥಾನವನ್ನು ಪದ್ಮರಾಜ್ ಪೂಜಾರಿ ಗೆ ನೀಡಬೇಕೆಂಬ ಕೂಗು ಕೂಡಾ ಕೇಳಿ ಬರುತ್ತಿದೆ.

Latest Indian news

Popular Stories