ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಮನೋಜ್ ಕುಮಾರ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

ಮಂಗಳೂರು: ಮನಪಾ 25ನೇ ಅವಧಿಯ ಮೇಯರ್ ಆಗಿ ಮನೋಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಮೇಯರ್ ಆಗಿ ಭಾನುಮತಿಯವರು ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಎಸ್‌ಸಿ) ಹಾಗೂ ಉಪ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ‘ಎ’ ನಿಗದಿಯಾಗಿತ್ತು. ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿ(ಎಸ್‌ಸಿ) ಮೀಸಲು ಅಭ್ಯರ್ಥಿ ಇಲ್ಲದ ಹಿನ್ನೆಲೆಯಲ್ಲಿ ಮೇಯರ್ ಆಗಿ ಮನೋಜ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಭಾನುಮತಿ ಹಾಗೂ ವನಿತಾ ಪ್ರಸಾದ್, ಕಾಂಗ್ರೆಸ್‌ನಿಂದ ಝೀನತ್ ಸಂಶುದ್ದೀನ್ ಸ್ಪರ್ಧಾ ಕಣದಲ್ಲಿದ್ದರು. ಚುನಾವಣಾ ಅಧಿಕಾರಿ ಉಮೇದುವಾರಿಕೆ ಹಿಂದೆಗೆದುಕೊಳ್ಳಲು 5ನಿಮಿಷ ಅವಕಾಶ ನೀಡಿದ್ದು, ವನಿತಾ ಪ್ರಸಾದ್ ನಾಮಪತ್ರ ಹಿಂದೆಗೆಕೊಂಡರು. ಈ ಹಿನ್ನೆಲೆಯಲ್ಲಿ ಝೀನತ್ ಸಂಶುದ್ದೀನ್ ಹಾಗೂ ಭಾನುಮತಿಯವರು ಚುನಾವಣಾ ಕಣದಲ್ಲಿದ್ದರು. ಜೀನತ್ ಸಂಶುದ್ದೀನ್ ಪರ 14ಮತ ಬಿದ್ದರೆ, ಭಾನುಮತಿಯವರಿಗೆ 47 ಮತ ಚಲಾವಣೆಯಾಯಿತು. ಈ ಮೂಲಕ ಭಾನುಮತಿಯವರು ಉಪಮೇಯರ್ ಆಗಿ ಆಯ್ಕೆಯಾದರು.

ತರಿಗೆ ಹಣಕಾಸು ಸ್ಥಾಯಿ ಸಮಿತಿ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿಸಮಿತಿ ಸೇರಿದಂತೆ ನಾಲ್ಕು ಸ್ಥಾಯಿ ಸಮಿತಿಗೆ ತಲಾ ಏಳೇಳು ಮಂದಿ ಸದಸ್ಯರಂತೆ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ನಡೆದ ವೇಳೆ 65 ಮನಪಾ ಸದಸ್ಯರಲ್ಲಿ 61ಮಂದಿ ಹಾಜರಿದ್ದು, ಚುನಾವಣೆಯಲ್ಲಿ ಪಾಲ್ಗೊಂಡರು. ಮೈಸೂರು ರೀಜನಲ್ ಕಮಿಷನರ್ ರಮೇಶ್ ಡಿ.ಎಸ್. ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು.

ನೂತನವಾಗಿ ಮೇಯರ್, ಉಪ ಮೇಯರ್‌ಗಳಿಗೆ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮನಪಾ ಸದಸ್ಯರು, ಅಭಿಮಾನಿಗಳು ಅಭಿನಯಿಸಿದರು.

Latest Indian news

Popular Stories