ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಸದ್ದು ಮಾಡಿದ ಆಸ್ತಿ ತೆರಿಗೆ ಏರಿಕೆ

ಮಂಗಳೂರು: ಆಸ್ತಿ ತೆರಿಗೆ ಏರಿಕೆ ಹಿನ್ನೆಲೆಯಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಭೆ ಅರ್ಧಕ್ಕೆ ನಿಂತಿದೆ.

ಆಸ್ತಿ ತೆರಿಗೆ ಭಾರೀ ಏರಿಕೆ ವಿಚಾರವನ್ನು ಖಂಡಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಫ್ಲಕ್ ಕಾರ್ಡ್ ಹಿಡಿದು ತೀವ್ರ ಪ್ರತಿಭಟನೆ ನಡೆಸಿದ್ದು, ವಿಪಕ್ಷ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮನಪಾ ಮೇಯರ್ ಎರಡೆರಡು ಬಾರಿ ಸಾಮಾನ್ಯ ಸಭೆಯನ್ನು ಮುಂದೂಡಿ ಕೊನೆಗೆ ಸಭೆಯೇ ಮೊಟಕುಗೊಳಿಸಿರುವ ಪ್ರಸಂಗ ನಡೆದಿದೆ.

ಸಭೆಯ ಆರಂಭದಲ್ಲಿಯೇ ಆಸ್ತಿ ತೆರಿಗೆ ಹೆಚ್ಚಳ ಕುರಿತು ಕಾಂಗ್ರೆಸ್ ಸದಸ್ಯರು ತೀವ್ರ ಪ್ರತಿಭಟನೆಗಿಳಿದಿದ್ದಾರೆ. ಪೂರ್ವಯೋಜಿತವಾಗಿ ಸಿದ್ಧಪಡಿಸಿರುವ ಫ್ಲಕ್ ಕಾರ್ಡ್ ಅನ್ನು ಹಿಡಿದು ಬಿಜೆಪಿಯ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಸದನದ ಬಾವಿಗಿಳಿದು ಪ್ರತಿಭಟಿಸಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸಭೆಯನ್ನು ಮೊದಲ ಬಾರಿ ಮುಂದೂಡಿದ್ದಾರೆ. ಆಗ ಎಲ್ಲಾ ಬಿಜೆಪಿ ಸದಸ್ಯರು ಸಭೆಯಿಂದ ಹೊರ ನಡೆದಿದ್ದಾರೆ.

ಬಳಿಕ ಮತ್ತೆ ಸಭೆ ಆರಂಭವಾಯಿತಾದರೂ ಪಟ್ಟುಬಿಡದ ಕಾಂಗ್ರೆಸ್ ಸದಸ್ಯರು ಮತ್ತೆ ಫ್ಲಕ್ ಕಾರ್ಡ್ ಹಿಡಿದು ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇದು ತೀವ್ರ ಗದ್ದಲಕ್ಕೆ ಕಾರಣವಾಯಿತು. ಇತ್ತ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಂತೆ ಅತ್ತ ಬಿಜೆಪಿ ಸದಸ್ಯರೂ ಸದನದ ಬಾವಿಗಿಳಿದು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಲ್ಲದೆ, ತಾವು ಕೂಡಾ ಫ್ಲಕ್ ಕಾರ್ಡ್ ಹಿಡಿದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

Latest Indian news

Popular Stories