ಸಕಲೇಶಪುರ: ಶಿರಾಡಿ ಘಾಟ್ ನಲ್ಲಿ ಕಾರಿನ ಮೇಲೆ ಬಿದ್ದ ಮಣ್ಣು, ಚಾಲಕ ಪಾರು, ಸಂಚಾರ ಸ್ಥಗಿತ

ಸಕಲೇಶಪುರ: ಸತತ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಇಂದು ಗುರುವಾರ ನಸುಕಿನ ಜಾವ ಏಕಾಏಕಿ ಮಣ್ಣು ಗುಡ್ಡ ಮಾರುತಿ ಸುಜುಕಿ ಕಂಪನಿಯ ಓಮಿನಿ ಕಾರು ಮೇಲೆ ಬಿದ್ದು ಕಾರು ಮಣ್ಣಿನಲ್ಲಿ ಸಿಲುಕಿಕೊಂಡಿದೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದೆ. ಸಕಲೇಶಪುರ ತಾಲ್ಲೂಕಿನ, ಎತ್ತಿನಹಳ್ಳ ಬಳಿ ಮಳೆಯ ಅಬ್ಬರದ ನಡುವೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

KA-17 M 5003 ನಂಬರ್‌ನ ಓಮ್ನಿ ಕಾರು ಮಣ್ಣಿನಡಿ ಸಿಲುಕಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಂದಾಯ ಇಲಾಖೆ ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.

ಬೇಲೂರು ತಾಲೂಕಿನ ಬಿಕ್ಕೊಡು ಮೂಲದ ಶರತ್ ಎಂಬವರು ಮಂಗಳೂರು ಕಡೆಯಿಂದ ಸಕಲೇಶಪುರ ಮಾರ್ಗವಾಗಿ ಬರುವ ಸಂದರ್ಭ ದೊಡ್ಡತಪ್ಪಲು ಸಮೀಪ ಭೂ ಕುಸಿತ ಉಂಟಾಗಿ ಕಾರಿನ ಮೇಲೆ ಬಿದ್ದಿದ್ದು ಕಾರು ಮಣ್ಣಿನ ರಾಶಿಯಲ್ಲಿ ಸಿಲುಕಿ ಸಂಪೂರ್ಣವಾಗಿ ಕುಸಿದಿದೆ.

ಈ ಸಂದರ್ಭದಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿಯ ಬಿಹಾರ ಮೂಲದ ಕಾರ್ಮಿಕಕರು ಅಖಿಲೇಶ್, ಶರತ್ ಅವರನ್ನು ವಾಹನದಿಂದ ಹೊರಗೆ ಕರೆತಂದು ಅವರ ಪ್ರಾಣ ಉಳಿಸಿದ್ದಾರೆ.

ಅಖಿಲೇಶ್ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಶರತ್ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭೂ ಕುಸಿತದಿಂದ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಘಟನೆ ನಡೆದ ಸ್ಥಳದಿಂದ ಎರಡೂ ಕಡೆಗೆ 5-5 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೆದ್ದಾರಿ ಕಾಮಗಾರಿಯವರು ಮಣ್ಣು ತೆರವುಗೊಳಿಸು ಕಾರ್ಯದಲ್ಲಿ ನಿರತರಾಗಿದ್ದು, ಮಣ್ಣಿನ ಕುಸಿತ ನಡೆಯುತ್ತಲೇ ಇದೆ. ಸದ್ಯದ ಮಟ್ಟಿಗೆ ಏಕಮುಖ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಹಾಸನದ ಕಂದಲಿ ಗ್ರಾಮದ ಬಳಿಯೇ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದಾರೆ. ಅತ್ತ ಚಾರ್ಮಾಡಿ ಘಾಟ್ ರಸ್ತೆಯಲ್ಲೂ ಪ್ರಯಾಣ ದುಸ್ತರವಾಗಿದ್ದು, ಹಾಸನ ಬಳಿಯೇ ವಾಹನ ನಿಲ್ಲಿಸಲು ಪೊಲೀಸರು ಸೂಚನೆ ನೀಡುತ್ತಿದ್ದಾರೆ.

ಮಂಗಳೂರು ಬಸ್​​ಗಳ ಸಂಚಾರಕ್ಕೆ ತಡೆ: ಸಕಲೇಶಪುರದವರೆಗೆ ತೆರಳುವ ಸಾರಿಗೆ ಬಸ್​​ಗಳಿಗೆ ಮಾತ್ರ ತೆರಳಲು ಅವಕಾಶ ನೀಡಲಾಗುತ್ತಿದೆ. ಮಂಗಳೂರು ಕಡೆಗೆ ಹೋಗುವ ಬಸ್​​​ಗಳಿಗೂ ಹಾಸನ ತಾಲ್ಲೂಕಿನ ಕಂದಲಿ ಬಳಿ ತಡೆಯೊಡ್ಡಲಾಗುತ್ತಿದೆ. ವಾಹನಗಳನ್ನು ತಡೆದು ಗುಡ್ಡ ಕುಸಿತದ ಬಗ್ಗೆ ಮಾಹಿತಿ ನೀಡಿ ವಾಪಸ್ ಕಳುಹಿಸಲಾಗುತ್ತಿದೆ. ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನಗಳಿಗೆ ತಡೆಯೊಡ್ಡಲಾಗುತ್ತಿದೆ.

Latest Indian news

Popular Stories