ಮಂಗಳೂರು: ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ಬಾಲಕಿಯೋರ್ವಳು ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಸುರತ್ಕಲ್ ಬಳಿಯ ಮುಕ್ಕ ಹೆದ್ದಾರಿಯಲ್ಲಿ ನಡೆದಿದೆ.
ಮುಕ್ಕ ಮಿತ್ರಪಟ್ಟದ ನಿವಾಸಿ ಮಾನ್ವಿ (12) ಮೃತಪಟ್ಟ ಬಾಲಕಿ.
ಮಾನ್ವಿ ಶಾಲೆ ಬಿಟ್ಟು ತಂದೆ ಯಶುಕುಮಾರ್ ಜೊತೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಲಾರಿಯು ಮೊದಲು ಸ್ಕೂಟರ್ ಒಂದಕ್ಕೆ ಢಿಕ್ಕಿಯಾಗಿತ್ತು. ಸ್ಕೂಟರ್ ತಾಗಿ ಬಾಲಕಿ ಹಾಗೂ ತಂದೆ ರಸ್ತೆಗೆ ಬಿದ್ದಿದ್ದರು. ಈ ವೇಳೆ ಲಾರಿ ಬಾಲಕಿಯ ಮೇಲೆ ಹರಿದಿದೆ ಎಂದು ತಿಳಿದು ಬಂದಿದೆ. ಯಶುಕುಮಾರ್ ರಸ್ತೆ ಮತ್ತೊಂದು ಬದಿಗೆ ಬಿದ್ದಿದ್ದರಿಂದ ಪಾರಾಗಿದ್ದಾರೆ.
ಮಾನ್ವಿ ಎನ್‌ಐಟಿಕೆ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಲಾರಿ ಚಾಲಕ ಮದ್ಯದ ಮತ್ತಿನಲ್ಲಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.