ಉಳ್ಳಾಲ | ಸಮುದ್ರದ ಕಲ್ಲಿಗೆ ಬಡಿದು ಬೋಟ್‌ ಮುಳುಗಡೆ; ಐವರ ರಕ್ಷಣೆ

ಉಳ್ಳಾಲ: ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಟ್ರಾಲ್‌ ಬೋಟೊಂದು ಫೆ.2ರ ಶುಕ್ರವಾರ ನಸುಕಿನ ಜಾವ ಸಮುದ್ರದ ಕಲ್ಲೊಂದಕ್ಕೆ ಬಡಿದು ಮುಳುಗಿದ್ದು, ಸ್ಥಳೀಯ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‍ನ ಮೀನುಗಾರರು ಬೋಟ್‍ನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್‍ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು, ಲಕ್ಷಾಂತರ ಮೌಲ್ಯದ ಬೋಟ್‍ಗೆ ಹಾನಿಯಾಗಿದೆ.

ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರಿಗೆ ಸೇರಿದ `ನವಾಮಿ – ಶಿವಾನಿ’ ಬೋಟ್ ದುರಂತಕ್ಕೀಡಾಗಿದ್ದು, ಬೋಟ್ ಚಲಾಯಿಸುತ್ತಿದ್ದ ನಯನಾ ಅವರ ಪತಿ ಪ್ರವೀಣ್ ಸುವರ್ಣ, ಉತ್ತರ ಪ್ರದೇಶದ ಮೀನುಗಾರರಾದ ಸಮರ ಬಹಯದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ, ವಾಸು ಅವರಲ್ಲಿ ಮೂವರನ್ನು ನಾಡದೋಣಿಯಲ್ಲಿ ಆಗಮಿಸಿದ ರಾಮ ಸುವರ್ಣ ಮತ್ತು ಯತೀಶ್ ಸುವರ್ಣ ರಕ್ಷಿಸಿದರೆ, ಉಳಿದ ಇಬ್ಬರನ್ನು ಮತ್ತು ಬೋಟನ್ನು ಪ್ರಕಾಶ್ ಖಾರ್ವಿ ಮಾಲಕತ್ವದ ದುರ್ಗಾ ಲಕ್ಷ್ಮಿ ಮತ್ತು ಮನೋಜ್ ಖಾರ್ವಿ ಮಾಲಕತ್ವದ ಶ್ರೀಗೌರಿ ಬೋಟ್‍ನ ಮೀನುಗಾರರು ರಕ್ಷಿಸಿದ್ದಾರೆ.
ಘಟನೆಯ ವಿವರ: ಗುರುವಾರ ಸಂಜೆ ಪ್ರವೀಣ್ ಸುವರ್ಣ ಸೇರಿದಂತೆ ಉತ್ತರ ಪ್ರದೇಶದ ಐವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು,ಇಂದು ನಸುಕಿನ ಜಾವ ನಾಲ್ಕು ಗಂಟೆಗೆ ಮೀನುಗಾರಿಕೆ ಮುಗಿಸಿ ಮೀನಿನೊಂದಿಗೆ ಉಳ್ಳಾಲ ಸಮುದ್ರ ತೀರದ ಮೂಲಕ ದಡಕ್ಕೆ ಆಗಮಿಸುತ್ತಿದ್ದರು

ಈ ಸಂದರ್ಭದಲ್ಲಿ ಬೋಟ್‍ನ ಒ್ರೋಫೈಲರ್ರ್ ಗೆ ಸಮುದ್ರದಲ್ಲಿ ಯಾವುದೋ ವಸ್ತು ತಾಗಿ ಪ್ರೊಫೈಲರ್ ನಿಂತಿದ್ದು, ಬೆಳಗಿನ ಜಾವ ಸಮುದ್ರ ಇಳಿತದಿಂದ ಸಮುದ್ರದಲ್ಲಿ ನಿಂತಿದ್ದ ಬೋಟ್ ಸಮುದ್ರದ ತೆರೆಗಳ ಹೊಡೆತಕ್ಕೆ ಕಡಲ್ಕೊರೆತದ ಶಾಶ್ವತ ಕಾಮಗಾರಿಯಾದ ರೀಫ್ ಬಳಿ ಹಾಕಿದ್ದ ಸರ್ವೇಕಲ್ಲಿಗೆ ಬಡಿದು ಬೋಟ್ ಮುಳುಗಲು ಆರಂಭಗೊಂಡಿದೆ.

ಹಡಗು ಮುಳುಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಮೀನುಗಾರಿಕೆಗೆ ತೆರಳಿದ್ದ ದುರ್ಗಾಲಕ್ಷ್ಮೀ ಮತ್ತು ಶ್ರೀ ಗೌರಿ ಬೋಟ್‍ನ ಮೀನುಗಾರರು ರಕ್ಷಿಸಿ, ಮುಳುಗುತ್ತಿದ್ದ ಬೋಟನ್ನು ಸಮುದ್ರ ಕಿನಾರೆಗೆ ಎಳೆದುಕೊಂಡು ಹೋಗಲು ಹಗ್ಗ ಕಟ್ಟಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದು ಈ ಸಂದರ್ಭದಲ್ಲಿ ಹಗ್ಗ ತುಂಡಾಯಿತು.

ಬಳಿಕ ಅಶ್ವಿನ್ ಕೋಟ್ಯಾನ್ ಮಾಲಕತ್ವದ ಜೈ ಮಾರುತಿ ಸ್ಪೀಡ್ ಬೋಟ್ ಮೂಲಕ ಹಳೆ ಬಂದರು ದಕ್ಕೆಗೆ ಎಳೆದುಕೊಂಡು ಹೋಗಿದ್ದು, ಉಳ್ಳಾಲ ಪೆÇಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಸರ್ವೆ ಕಲ್ಲು ಇರುವಲ್ಲಿ ಸಿಗ್ನಲ್ ವ್ಯವಸ್ಥೆ ಇಲ್ಲ: ಕಡಲ್ಕೊರೆತ ಸಂದರ್ಭ ಸಮುದ್ರದಿಂದ ಕೆಲವು ಮಾರು ದರ ಹಾಕಿರುವ ರೀಫ್ ಬಳಿಯಲ್ಲಿ ಸರ್ವೆ ಕಲ್ಲು ಹಾಕಿದ್ದು, ಈ ಕಲ್ಲು ಸಮುದ್ರದಲ್ಲಿ ಮುಳುಗಿರುವುದರಿಂದ ಸ್ಥಳೀಯ ಮೀನುಗಾರರಿಗೆ ಕಲ್ಲು ಇರುವಲ್ಲಿ ಸಿಗ್ನಲ್ ವ್ಯವಸ್ಥೆ ಇಲ್ಲದೆ ದೋಣಿಗಳು ಕಲ್ಲಿಗೆ ಬಡಿದು ಹಾನಿಯಾಗುತ್ತಿದೆ. ಬೇರೆ ಕಡೆ ಸಮುದ್ರದಲ್ಲಿರುವ ಇರುವ ಕಲ್ಲಿನ ಮಾಹಿತಿ ಮೀನುಗಾರರಿಗೆ ತಿಳಿಯುವ ಸಿಗ್ನಲ್ ವ್ಯವಸ್ಥೆ ಮಾಡಿದ್ದು, ಉಳ್ಳಾಲ ಪರಿಸರದಲ್ಲಿ ಈ ವ್ಯವಸ್ಥೆ ಇಲ್ಲದೆ ಹಲವಾರು ದೋಣಿಗಳು ಅಪಘಾತಕ್ಕೀಡಾಗುತ್ತಿದೆ ಎಂದು ಮೀನುಗಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

Latest Indian news

Popular Stories