ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

ದಾವಣಗೆರೆ: ಧಾರ್ಮಿಕ, ದತ್ತಿ ಇಲಾಖೆ ಅಧೀನದ ಹಿಂದೂ ದೇವಾಲಯಗಳು, ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಸನ ಜಿಲ್ಲೆ ಮಾದರಿಯಲ್ಲಿ ದೇವರ ಹೆಸರಿನಲ್ಲಿ ಆಸ್ತಿಗಳನ್ನು ನೋಂದಣಿ ಮಾಡಿಸಬೇಕು ಎಂದು ಸಲಹೆ ನೀಡಿದರು.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳು, ಆಸ್ತಿಗಳ ರಕ್ಷಣೆಗೆ ಸರ್ಕಾರ ಮೊದಲು ಮುಂದಾಗಬೇಕು ಎಂದರು. ಭಾರತ ನಮ್ಮದೇ ದೇಶ ಅಂದುಕೊಂಡು ಇಲ್ಲಿಯವರೆಗೆ ದೇವಸ್ಥಾನ, ಆಸ್ತಿಗಳು ದೇವರ ಹೆಸರಿನ ಆಸ್ತಿಯಾಗದೆ ಹಾಗೆಯೇ ಉಳಿದಿವೆ. ಆದರೂ, ಸ್ವಲ್ಪ ಸ್ವಲ್ಪ ಪರಭಾರೆಯಾಗುತ್ತಾ ಬಂದಿದೆ. ಈಗ ಎಲ್ಲರಿಗೂ ಜ್ಞಾನೋದಯವಾಗಿದೆ. ದೇವರ ಹೆಸರಿನಲ್ಲೇ ದೇವಸ್ಥಾನ, ದೇವಳದ ಆಸ್ತಿ ನೋಂದಣಿ ಮಾಡುವ ಕೆಲಸ ಮೊದಲು ಪ್ರಾರಂಭವಾಗಲಿ ಎಂದು ಸ್ವಾಮೀಜಿ ಆಗ್ರಹಿಸಿದರು.
ಹಾಸನದಲ್ಲಿ ದೇವಸ್ಥಾನಗಳ ಆಸ್ತಿಯನ್ನು ದೇವರ ಹೆಸರಿಗೆ ನೋಂದಣಿ ಮಾಡುವ ಕೆಲಸ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹದ್ದೊಂದು ಮೇಲ್ಪಂಕ್ತಿಯನ್ನು ಹಾಸನ ಜಿಲ್ಲೆಯ ಅಧಿಕಾರಿಗಳು ಹಾಕಿಕೊಟ್ಟಿದ್ದು, ಅದೇ ಮಾದರಿ ಕೆಲಸ ಎಲ್ಲ ಕಡೆ ಆಗಬೇಕು ಎಂದು ಆಶಿಸಿದರು.
ತಾವು ಹಿಂದೆಯೂ ಈ ಮಾತನ್ನ ಹೇಳಿದ್ದೆವು. ದೇವಸ್ಥಾನ, ದೇವಳ ಆಸ್ತಿಗಳು ದೇವರ ಹೆಸರಿಗೆ ಅಗತ್ಯವಾಗಿ ನೋಂದಣಿ ಆಗಲೇಬೇಕಿದೆ ಎಂದರು.
ರೈತರ ಜಮೀನು ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡಿರುವುದರ ಹಿಂದೆ ಯಾರು ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ತೀರ್ಮಾನ ಆಗಬೇಕು. ಯಾರ ಆಸ್ತಿ ಯಾರದ್ದೋ ಅಂತಹವರಿಗೆ ಸೇರಬೇಕು. ಇದ್ದಕ್ಕಿದ್ದಂತೆ ನಮ್ಮ ಆಸ್ತಿ ಬೇರೆಯವರ ಆಸ್ತಿ ಅಂದರೆ ಹೇಗೆ, ಹಾಗಾಗಬಾರದಿತ್ತು ಎಂಬ ಪ್ರಶ್ನೆ ಸಹಜ. ಅಂತಹದ್ದೊಂದು ಕಾನೂನು ಎಲ್ಲಿಂದ, ಯಾಕೆ ಮತ್ತು ಹೇಗೆ ಬಂದಿತು ಎಂಬುದರ ಬಗ್ಗೆಯೂ ಸಮಗ್ರ ವಿಚಾರಣೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ತಲೆ ತಲಾಂತರದಿಂದ ಬಂದಂತಹ ಆಸ್ತಿಗಳು ಏಕಾಏಕಿ ಪರಭಾರೆಯಾಗಿ, ವಕ್ಫ್ ಆಸ್ತಿ ಅಂತಾ ನೋಂದಣಿಯಾಗುವುದಾದರೂ ಹೇಗೆ ಸಾಧ್ಯ. ಅದನ್ನೆಲ್ಲಾ ಯಾರು ಮಾಡಿದರು. ಅದನ್ನೆಲ್ಲಾ ಮೊದಲು ತೀರ್ಮಾನಿಸಿ, ಅನ್ಯಾಯ ಮಾಡಿದ್ದರೆ ಅಂತಹವರಿಗೆ ಶಿಕ್ಷೆ ಕೊಡುವ ಕೆಲಸ ಮಾಡಲಿ. ಇಲ್ಲವೆಂದರೆ ಯಾರೂ ಏನೂ ಮಾಡಲಿಕ್ಕಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರ ನೀಡಿದರು.
ನಾಗರಿಕರು, ಜನರಲ್ಲಿ, ರೈತರಲ್ಲಿ ಭಯ ಹುಟ್ಟು ಹಾಕುವ ಕೆಲಸ ಯಾವುದೇ ಸರ್ಕಾರಗಳೂ ಸಹ ಮಾಡಬಾರದು. ಈಗ ಬಂದಿರುವ, ಉಂಟಾಗಿರುವ, ತಲೆದೋರಿರುವ ಭಯ ನಿವಾರಣೆ ಮಾಡುವ ನೆಲೆಯಲ್ಲಿ ಸರ್ಕಾರದ ತೀರ್ಮಾನ ಆಗಬೇಕು. ಆಸ್ತಿ ಯಾರದ್ದೋ ಅಂತಹವರಿಗೆ ಅವುಗಳು ಸೇರಬೇಕು, ವಕ್ಫ್ ಮಂಡಳಿ ರದ್ಧುಪಡಿಸುವ ಒತ್ತಾಯದ ಬಗ್ಗೆ ಎಲ್ಲರೂ ಕುಳಿತು ತೀರ್ಮಾನಿಸಬೇಕು. ಅದು ನಾವು ಮಾಡುವ ಕೆಲಸವಲ್ಲವಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಯಾವೆಲ್ಲಾ ಕಡೆಗಳಲ್ಲಿ ವಕ್ಫ್ ಆಸ್ತಿ ಸಮಸ್ಯೆ ಆಗಿದೆ ಅಂತಾ ಅಲ್ಲಿಗೆ ಹೋದಾಗಲೇ ಗೊತ್ತಾಗಬೇಕಷ್ಟೇ. ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿ ದೇವಸ್ಥಾನಗಳಿದ್ದಾಗಲೂ ರಕ್ಷಿಸುವ ಕೆಲಸ ಮಾಡಬೇಕು. ಧಾರ್ಮಿಕ, ದತ್ತಿ ಇಲಾಖೆಯ ದೇವಸ್ಥಾನಗಳು, ಆಸ್ತಿಗಳನ್ನು ಆಯಾ ದೇವರ ಹೆಸರಿಗೆ ನೋಂದಣಿ ಮಾಡಿಸಿ, ಸಂಪತ್ತನ್ನು ಕಾಯುವ ಕೆಲಸ ಮಾಡಲಿ. ಹಾಸನ ಜಿಲ್ಲೆಯ ಅಧಿಕಾರಿಗಳ ಮಾದರಿಯನ್ನು ರಾಜ್ಯದಲ್ಲಿ ವಿಸ್ತರಿಸಲಿ ಎಂದು ಪೇಜಾವರ ಆಗ್ರಹಿಸಿದರು.