ಧಾರವಾಡ: ಪ್ರಶಸ್ತಿಗೆ ಕರೆಸಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಕಂಬಾರರಿಗೆ ಕರ್ನಾಟಕ ವಿಶ್ವವಿದ್ಯಾಲಯ ಅಗೌರವ

ಧಾರವಾಡ(ಜ.30): ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ್ಷುಲ್ಲಕ ಕಾರಣಕ್ಕೋಸ್ಕರ ಪ್ರತಿಷ್ಠಿತ ಅರಿವೇ ಗುರು ಪ್ರಶಸ್ತಿ ಕಾರ್ಯಕ್ರಮ ಮುಂದೂಡಿದ್ದಲ್ಲದೇ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಮೂವರು ಪ್ರಶಸ್ತಿ ಪುರಸ್ಕೃತರಿಗೆ ಅಗೌರವ ತೋರಿರುವ ಘಟನೆ ನಡೆದಿದೆ.
ಸಾಕಷ್ಟು ಸಂದರ್ಭದಲ್ಲಿ ಪ್ರಶಸ್ತಿ ಕಾರ್ಯಕ್ರಮ ಮುಂದೂಡುವುದು ಸಾಮಾನ್ಯ.ಆದರೆ, ವಿವಾದಿತ ಬೆಳಗು ಪಠ್ಯದ ಲೇಖನವನ್ನು ಕರ್ನಾಟಕ ವಿವಿ ಇತ್ತೀಚೆಗೆ ಕೈ ಬಿಟ್ಟಿದ್ದರೂ ಕವಿವಿ ಕೆಲ ಸಂಶೋಧನಾ ವಿದ್ಯಾರ್ಥಿಗಳ ಹಾಗೂ ವಿವಿ ಕೆಲ ಸಂಘಟನೆಗಳ ಒಣ ಪ್ರತಿಷ್ಠೆಯಿಂದಾಗಿ ಬುಧವಾರ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ನಿಗದಿಯಾಗಿದ್ದ ಅರಿವೇ ಗುರು ಪ್ರಶಸ್ತಿ ಸಮಾರಂಭ ಮುಂದೂಡಬೇಕಾಯಿತು.
ಕವಿವಿ ಕೊಡಮಾಡುವ ಅರಿವೇ ಗುರು 2024ನೇ ಸಾಲಿನ ಪ್ರಶಸ್ತಿಯನ್ನು ಕಲಾ ಕ್ಷೇತ್ರದಿಂದ ಡಾ. ಚಂದ್ರಶೇಖರ ಕಂಬಾರ, ವಿಜ್ಞಾನ ಕ್ಷೇತ್ರದಿಂದ ಡಾ. ವಿ.ಜಿ. ತಳವಾರ ಹಾಗೂ ಕವಿವಿ ಎಮರಿಟೀಸ್ ಪ್ರಾಧ್ಯಾಪಕ ಪ್ರೊ. ಎನ್.ಎಂ. ಬುಜುರ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ನಿಗದಿ ಯಂತೆ ಪ್ರಶಸ್ತಿ ಪುರಸ್ಕೃತರು ಸಹ ವಿವಿ ಆವರಣಕ್ಕೆ ಬಂದಿದ್ದರು. ಅವರನ್ನು ಮೆರವಣಿಗೆ ಮೂಲಕ ಸುವರ್ಣ ಮಹೋತ್ಸವ ಭವನಕ್ಕೆ ಕರೆದೊಯ್ಯಲು ಎಲ್ಲ ರೀತಿಯ ಸಿದ್ದತೆಯೂ ಆಗಿತ್ತು. ಆದರೆ, ವಿವಾ ದಿತ ಪಠ್ಯದ ಅಭ್ಯಾಸ ಮಂಡಳಿಯ ಅಧ್ಯಕ್ಷರು ಹಾಗೂ ಕನ್ನಡ ವಿಭಾಗದ ಅಧ್ಯಕ್ಷ ಡಾ. ಕೃಷ್ಣಾ ನಾಯಕ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಗೊಂದಲ ಉಂಟಾಗಲಿದೆ ಎಂದು ಮಂಗಳವಾರ ಸಂಜೆ ಕುಲಸಚಿವರಿಗೆ ಕವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘವು ಪತ್ರದ ಮೂಲಕ ಮನವಿ ಸಲ್ಲಿಸಿದ್ದೇ ದೊಡ್ಡ ಅವಾಂತರಕ್ಕೆ ಕಾರಣವಾಯಿತು.
ಈ ಪತ್ರದ ಹಿನ್ನೆಲೆಯಲ್ಲಿ ಉಪ ನಗರ ಪೊಲೀಸರಿಗೆ ಮಾಹಿತಿ ನೀಡಿದ ಕುಲಸಚಿವರು ಗೊಂದಲ ಆಗದಂತೆ ಬಂದೋಬಸ್ತ್ ಕೇಳಿದ್ದರು. ಪೊಲೀಸರು ಸೂಕ್ತ ಬಂದೋಬಸ್ತ್ ಸಹ ವಹಿಸಿದ್ದರು. ಇನ್ನೇನು ಕಾರ್ಯಕ್ರಮ ಶುರು ಆಗಬೇಕು ಎನ್ನುವ ಷ್ಟರಲ್ಲಿ ಪ್ರೊ. ಕೃಷ್ಣಾ ನಾಯಕ ಅವರು ಭಾಗವಹಿಸ ಬೇಕು ಎಂದು ಕೆಲ ವಿದ್ಯಾರ್ಥಿಗಳು ವಾದ ಮಂಡಿಸಿ ದರೆ, ಇನ್ನು ಕೆಲವರು ಬೇಡ ಎನ್ನುವ ಹಠದಿಂದ ವಿಶ್ವವಿದ್ಯಾಲಯವುಸಿಂಡಿಕೇಟ್ ಸಭೆಮಾಡಿತಾದರೂ ಸರಿಯಾಗಿ ನಿರ್ಣಯ ತೆಗೆದುಕೊಳ್ಳದೇ ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭವನ್ನೇ ಮುಂದೂಡಿತು
ಬೆಳಗು ಪಠ್ಯ ವಿವಾದಕ್ಕೆ ಕಾರಣರಾದರು ಎನ್ನಲಾದ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿರುವ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ಕಾರ್ಯಕ್ರಮ ಬಹಿಷ್ಕಾರ ಮಾಡುವುದಾಗಿ ಹೇಳಿದ್ದರಿಂದ ಅರಿವೇ ಗುರು ಪ್ರಶಸ್ತಿ ಪ್ರದಾನವನ್ನು ಮುಂದೂಡಲಾಗಿದೆ. ಮುಂದೂಡಿಕೆ ದಿನಾಂಕ ಇನ್ನೂ ನಿಗದಿ ಮಾಡಿಲ್ಲ. ಯಾವುದೇ ಸಮಸ್ಯೆ ಇಲ್ಲದೆ ಕಾರ್ಯಕ್ರಮ ನಡೆಸಬೇಕು ಎಂದು ಹಲವು ಗಂಟೆಗಳ ಕಾಲ ಚರ್ಚೆ ನಡೆಸಿದೆವು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಇರುವ ಸಮಾರಂಭದಲ್ಲಿ ಗೊಂದಲ ಸೃಷ್ಟಿಯಾದರೆ, ಕವಿವಿ ಘನತೆಗೆ ಧಕ್ಕೆ ಬರಲಿದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆ. ಪ್ರಶಸ್ತಿ ಪುರಸ್ಕೃತರನ್ನು ವಾಪಸ್ ಕಳುಹಿಸಿದ್ದಕ್ಕೆ ನಮಗೂ ಬೇಸರವಿದೆ ಎಂದು ಕವಿವಿ ಪ್ರಭಾರ ಕುಲಪತಿ ಡಾ. ಜಯಶ್ರೀ ಎಸ್. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಪ್ರತಿಷ್ಠಿತ ಕರ್ನಾಟಕ ವಿವಿ ಅರಿವೇ ಗುರು ಪ್ರಶಸ್ತಿ ಸ್ವೀಕರಿಸಲು ನಗು ಮುಖದಿಂದ ಬಂದಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಹಾಗೂ ಗಣ್ಯರಾದ ಡಾ. ವಿ.ಜಿ. ತಳವಾರ ಮತ್ತು ಪ್ರೊ. ಎನ್.ಎಂ. ಬುಜುರ್ಕೆ ವಿಶ್ವವಿದ್ಯಾಲಯದ ಆಂತರಿಕ ಗೊಂದಲ, ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಹಿಂದೇ ಟು ಹಾಕಿದ ವಿವಿ ನಿಲುವಿನಿಂದ ಬೇಸರದಿಂದ ಹೊರ ನಡೆದರು.