ನವದೆಹಲಿ: ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸೇವಾ ಸಂಸ್ಥೆ ಎಸ್ ಬಿಐ ಸೇರಿದಂತೆ 3 ಬ್ಯಾಂಕ್ ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಭಾರಿ ದಂಡ ಹೇರಿದೆ.
ಈ ಹಿಂದಷ್ಟೇ ಅಂದರೆ ಮಾರ್ಚ್ 15ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಿದ್ದ ಆರ್ ಬಿಐ ಇದೀಗ ದೇಶದ ಮೂರು ಪ್ರಮುಖ ಬ್ಯಾಂಕ್ ಗಳಿಗೆ ಭಾರಿ ಪ್ರಮಾಣದ ದಂಡ ಹೇರಿದೆ. ಭಾರತೀಯ ಸ್ಟೇಟ್ ಬ್ಯಾಂಕ್ (SBI), ಕೆನರಾ ಬ್ಯಾಂಕ್ ಹಾಗೂ ಸಿಟಿ ಯೂನಿಯನ್ ಬ್ಯಾಂಕ್‌ಗಳಿಗೆ (City Union Bank) ಸುಮಾರು 3 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಆರ್‌ಬಿಐ ನಿಬಂಧನೆಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಮೂಲಗಳ ಪ್ರಕಾರ ಎಸ್‌ಬಿಐಗೆ 2 ಕೋಟಿ ರೂ. ದಂಡ ವಿಧಿಸಲಾಗಿದ್ದು, ಠೇವಣಿದಾರರ ಶೈಕ್ಷಣಿಕ ಜಾಗೃತಿ ಫಂಡ್ ಯೋಜನೆ (2014) ಅಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ವಿಧಿಸಿದೆ.
ಅಂತೆಯೇ ಆದಾಯ ಗುರುತಿಸುವ ಮಾನದಂಡಗಳು, ಅನುತ್ಪಾದಕ ಆಸ್ತಿ ಪತ್ತೆಹಚ್ಚುವಲ್ಲಿ ಚ್ಯುತಿ ಸೇರಿ ಹಲವು ಕಾರಣಗಳಿಂದಾಗಿ ಸಿಟಿ ಯುನಿಯನ್ ಬ್ಯಾಂಕ್‌ಗೆ 66 ಲಕ್ಷ ರೂ. ದಂಡ ವಿಧಿಸಿದೆ. ಮತ್ತೊಂದೆಡೆ, ಆರ್‌ಬಿಐ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದ ಕೆನರಾ ಬ್ಯಾಂಕ್‌ಗೆ 32.30 ಲಕ್ಷ ರೂ. ದಂಡ ವಿಧಿಸಿದೆ.