ಬೆಂಗಳೂರು: ರಾಜ್ಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಡೆಸಲಾಗುವ ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ 60/- ರೂಪಾಯಿಗಳ (ಅರವತ್ತು ರೂಪಾಯಿ) ಪರೀಕ್ಷಾ ಶುಲ್ಕವನ್ನು ನಿಗದಿ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ವತಿಯಿಂದ ದಿನಾಂಕ 30/01/2023 ರಂದು ಹೊರಡಿಸಿರುವ ಸುತ್ತೋಲೆಯು ಖಂಡನೀಯ ಎಂದು ಎಸ್.ಐ.ಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುತ್ತೋಲೆಯಲ್ಲಿ 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಲು ಆದೇಶಿಸಿರುವ ಸುತ್ತೋಲೆಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.
ಶಿಕ್ಷಣದಂತಹ ಮೂಲಭೂತ ಹಕ್ಕಿನ ಸಂಪೂರ್ಣ ಜವಾಬ್ದಾರಿಯು ಸರ್ಕಾರದ್ದಾಗಿರಬೇಕು ಎಂಬುದು ಪ್ರಜಾಪ್ರಭುತ್ವದ ಆಶಯವಾಗಿದೆ, ರಾಜ್ಯದ ಗ್ರಾಮೀಣ ಭಾಗದ ಮತ್ತು ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಈ ಶುಲ್ಕವು ಹೊರೆಯಾಗಲಿದೆ.
ಈ ಹಿಂದೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷಾ ಶುಲ್ಕದಲ್ಲಿಯೇ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಸಹ ನಡೆಸಲಾಗುತ್ತಿತ್ತು, ಇದೀಗ ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರತ್ಯೇಕವಾಗಿ ಹಣ ವಸೂಲಿ ಮಾಡುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರವಲ್ಲ.
ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲು ನಿರ್ದೇಶನಾಲಯವು ಮಕ್ಕಳಿಂದಲೇ ಹಣ ವಸೂಲಿ ಮಾಡುವ ಕ್ರಮವೂ ಸರ್ಕಾರದ ದಿವಾಳಿತನವನ್ನು ಎತ್ತಿ ತೋರಿಸುತ್ತದೆ.
ಕೆಲವು ಶಾಲೆಗಳು ಉತ್ತರ ಪತ್ರಿಕೆಗಾಗಿ ಹಣ ಸಂಗ್ರಹಿಸುವುದಕ್ಕೆ ಇದು ಪ್ರೇರಣೆ ನೀಡುವ ಆತಂಕವಿದೆ, ಈಗಾದರೇ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕ್ರಮೇಣವಾಗಿ ಖಾಸಗೀಕರಣಗೊಳಿಸುವ ಷಡ್ಯಂತ್ರ ಅಡಗಿದೆ ಎಂಬುದು ಗೋಚರಿಸುತ್ತದೆ, ಇದು ಪ್ರತಿಯೊಂದು ಅಕ್ಷರಕ್ಕೆ ಹಣದ ಬೆಲೆ ಕಟ್ಟಿ ಶಿಕ್ಷಣವನ್ನು ಪಡೆದುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿಯತ್ತ ನಮ್ಮನ್ನು ಕೊಂಡೊಯ್ಯುಬಹುದಾಗಿದೆ.
ಸರ್ಕಾರದ ಇಂತಹ ಕ್ರಮಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣದ ವ್ಯಾಪಾರೀಕರಣಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ.
ಸರ್ಕಾರ ತಕ್ಷಣವೇ ಸಾರ್ವಜನಿಕ ಶಿಕ್ಷಣ ವಿರೋಧಿ ನಿರ್ಧಾರವನ್ನು ಹಿಂಪಡೆದು ಈ ಹಿಂದಿನಂತೆಯೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಕೇವಲ ವಾರ್ಷಿಕ ಪರೀಕ್ಷೆಗೆ ಮಾತ್ರ ಶುಲ್ಕ ಪಡೆಯಬೇಕು ಎಂದು ಆಗ್ರಹಿಸುತ್ತೇವೆ.