ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಪ್ರಾರಂಭವಾಗಲಿವೆ. ಸಿಬಿಎಸ್‌ಇ ಈ ಹಿಂದೆ ಬಿಡುಗಡೆ ಮಾಡಿದ ವೇಳಾಪಟ್ಟಿ 2023ರ ಪ್ರಕಾರ, 10ನೇ ತರಗತಿ ಪರೀಕ್ಷೆಗಳು ಮಾರ್ಚ್ 21 ರವರೆಗೆ ನಡೆಯಲಿದ್ದು, 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 5, 2023 ರವರೆಗೆ ನಡೆಯಲಿವೆ.
ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಪ್ರವೇಶ ಪತ್ರಗಳನ್ನ ಇತ್ತೀಚೆಗೆ ಸಿಬಿಎಸ್‌ಇ cbse.gov.in ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗಿದೆ. ಶಾಲೆಗಳ ಮುಖ್ಯಸ್ಥರು ಸಿಬಿಎಸ್‌ಇ 10 ಮತ್ತು 12 ನೇ ಪ್ರವೇಶ ಪತ್ರಗಳನ್ನ ಶಾಲಾ ಲಾಗಿನ್ ಐಡಿಯಿಂದ ಡೌನ್ಲೋಡ್ ಮಾಡಬೇಕಾಗಿತ್ತು ಮತ್ತು ಅವುಗಳನ್ನ ಶಾಲಾ ಪ್ರಾಂಶುಪಾಲರು ಸಹಿ ಮಾಡಿ ಸೀಲ್ ಮಾಡಬೇಕು. 2023 ರ ಸಿಬಿಎಸ್‌ಇ ಪರೀಕ್ಷೆಗೆ ಪ್ರತಿವರ್ಷ ಸುಮಾರು 35-36 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ.
ಸಿಬಿಎಸ್‌ಇ ಪರೀಕ್ಷೆ 2023 ಬೆಳಿಗ್ಗೆ 10.30 ಕ್ಕೆ ಪ್ರಾರಂಭ.!
ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗಳು ಉದ್ಯಮಶೀಲತೆ ಪತ್ರಿಕೆಯೊಂದಿಗೆ ಪ್ರಾರಂಭವಾಗಲಿದ್ದು, 10ನೇ ತರಗತಿ ಪರೀಕ್ಷೆಗಳು ಚಿತ್ರಕಲೆ, ಗುರುಂಗ್, ರೈ, ತಮಾಂಗ್, ಶೆರ್ಪಾ, ಥಾಯ್ ಮೈನರ್ ವಿಷಯಗಳೊಂದಿಗೆ ಪ್ರಾರಂಭವಾಗುತ್ತವೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಸಿಬಿಎಸ್‌ಇ ಪರೀಕ್ಷೆ 2023ರ ಸಮಯ ಬೆಳಿಗ್ಗೆ 10.30 ಆಗಿದೆ. ಕೋವಿಡ್ -19 ನಿಂದಾಗಿ 2020 ರಿಂದ ಕಳೆದ ಎರಡು ವರ್ಷಗಳಿಂದ ಬಾಧಿತರಾಗಿದ್ದ ವಿದ್ಯಾರ್ಥಿಗಳು ಈಗ ಈ ವರ್ಷ ಸಾಮಾನ್ಯ ಬೋರ್ಡ್ ಪರೀಕ್ಷೆಗಳಿಗೆ ಮರಳಲಿದ್ದಾರೆ.
ಕರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ, ಸಿಬಿಎಸ್‌ಇ ಸೈದ್ಧಾಂತಿಕ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕಾಯಿತು ಮತ್ತು ಪರ್ಯಾಯ ಮೌಲ್ಯಮಾಪನ ಮಾನದಂಡವನ್ನು ರೂಪಿಸಲಾಯಿತು. ಕಳೆದ ವರ್ಷ, ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಎರಡು ಅವಧಿಗಳಲ್ಲಿ ನಡೆಸಿತ್ತು. ಆದ್ದರಿಂದ, ಮೂರು ವರ್ಷಗಳ ನಂತರ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಬೋರ್ಡ್ ಪರೀಕ್ಷೆಗೆ ಅಗತ್ಯ ಮಾರ್ಗಸೂಚಿಗಳನ್ನು ಇಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳು ಈ ಕೆಳಗಿನ ಮುಖ್ಯ ಸಂಗತಿಗಳನ್ನ ನೆನಪಿಡಬೇಕು.!
- ಬೆಳಿಗ್ಗೆ 10.30ಕ್ಕೆ ಪ್ರಾರಂಭವಾಗಲಿರುವ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಸಮಯಕ್ಕಿಂತ ಮುಂಚಿತವಾಗಿ ಬರಬೇಕು.
- ಜಿಪಿಎಸ್ ಹೊಂದಿರುವ ಫೋನ್ಗಳು, ಸಂವಹನ ಉಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ನಿಷೇಧಿತ ವಸ್ತುಗಳು ಮತ್ತು ಮೊಬೈಲ್ಗಳನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಬಾರದು.
- ವಿದ್ಯಾರ್ಥಿಗಳು ಸಿಬಿಎಸ್‌ಇ ಪ್ರವೇಶ ಪತ್ರ 2023ರಲ್ಲಿ ನೀಡಲಾದ ಪ್ರಮುಖ ಸೂಚನೆಗಳನ್ನು ಓದಬೇಕು ಮತ್ತು ಅನುಸರಿಸಬೇಕು.
- ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕಟ್ಟುನಿಟ್ಟಾದ ಶಿಸ್ತನ್ನು ಪಾಲಿಸಬೇಕು.
- ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
- ವಿದ್ಯಾರ್ಥಿಗಳು ಸಿಬಿಎಸ್‌ಇ ಪ್ರವೇಶ ಪತ್ರ 2023 ರ ಜೊತೆಗೆ ಶಾಲಾ ಸಮವಸ್ತ್ರ ಮತ್ತು ಶಾಲಾ ಗುರುತಿನ ಚೀಟಿಯೊಂದಿಗೆ ಹೋಗಬೇಕು ಮತ್ತು ಅನುಮತಿಸಲಾದ ಲೇಖನ ಸಾಮಗ್ರಿಗಳೊಂದಿಗೆ ಮಾತ್ರ ಹೋಗಬೇಕು.
- ಪರೀಕ್ಷಾ ಕೊಠಡಿಯಲ್ಲಿ ಮಾಸ್ಕ್ ಧರಿಸುವುದು ಸೇರಿದಂತೆ ಶಾಲೆ ಹೊರಡಿಸಿದ ಮಾರ್ಗಸೂಚಿಗಳನ್ನ ಅನುಸರಿಸಬೇಕಾಗುತ್ತದೆ.