ಬೀದರ್: ಬಿ.ಎಸ್ಸಿ(ಕೆಮಿಸ್ಟ್ರಿ) ಪದವಿ ಪರೀಕ್ಷೆಯಲ್ಲಿ ಇಲ್ಲಿಯ ಶಾಹೀನ್ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿ ಸಿಮನ್ ಬಾನು ಡಿ.ಯು. ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಚಿನ್ನದ ಪದಕ ಗಳಿಸಿ ಸಾಧನೆಗೈದಿದ್ದಾರೆ.
90.7% ಅಂಕಗಳೊಂದಿಗೆ ಅವರು ಗೌತಮ್ ಮೆಹ್ತಾ ಚಿನ್ನದ ಪದಕಕ್ಕೂ ಭಾಜನರಾಗಿದ್ದಾರೆ.
ಕಾಲೇಜಿನ ಇನ್ನೊಬ್ಬರು ವಿದ್ಯಾರ್ಥಿನಿ ಮುಸ್ಕಾನ್ ಫಾತಿಮಾ ಶೇ 90.95 ರಷ್ಟು ಅಂಕ ಪಡೆದು, ವಿಶ್ವವಿದ್ಯಾಲಯಕ್ಕೆ ಎಂಟನೇ ರ್ಯಾಂಕ್ ಗಳಿಸಿದ್ದಾರೆ.
ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು ಶಾಹೀನ್ ಮಹಿಳಾ ಪದವಿ ಕಾಲೇಜು ಆರಂಭಿಸಿದ್ದು, ಗುಣಮಟ್ಟದ ಶಿಕ್ಷಣದ ಕಾರಣ ಕಾಲೇಜು ವಿದ್ಯಾರ್ಥಿಗಳು ಪ್ರತಿ ವರ್ಷ ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದ್ದಾರೆ.
ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿನ ಸಿಮನ್ ಬಾನು ಡಿ.ಯು. ಹಾಗೂ ಮುಸ್ಕಾನ್ ಫಾತಿಮಾ ಅವರ ಸಾಧನೆಯನ್ನು ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯರಿಗೆ ಐಎಎಸ್, ಐಪಿಎಸ್‍ನಂತಹ ಉನ್ನತ ಹುದ್ದೆಗೇರಲು ಪ್ರೇರಣೆ ನೀಡುತ್ತಿದೆ. ಎರಡು ವರ್ಷದಿಂದ ಯುಪಿಎಸ್‍ಸಿ ಪರೀಕ್ಷೆ ತರಬೇತಿಯನ್ನೂ ಕೊಡುತ್ತಿದೆ ಎಂದು ತಿಳಿಸಿದ್ದಾರೆ.