ಕೊಡಗು SSLC ವಿದ್ಯಾರ್ಥಿನಿಯ ಭೀಕರ ಹತ್ಯೆ ಪ್ರಕರಣ, ಮೃತ ವಿದ್ಯಾರ್ಥಿನಿಯ ರುಂಡ ಪತ್ತೆ

ಕೊಡಗಿನ ಸೋಮವಾರ ಪೇಟೆಯಲ್ಲಿ ನಡೆದಿದ್ದ ಅಪ್ರಾಪ್ತೆಯ ತಲೆ ಕಡಿದು ಭೀಕರ ಹತ್ಯೆ ಪ್ರಕರಣದಲ್ಲಿ ಇದೀಗ ವಿದ್ಯಾರ್ಥಿನಿಯ ರುಂಡ ಪತ್ತೆಯಾಗಿದೆ. ಬಂಧಿತ ಆರೋಪಿ ರುಂಡವನ್ನು ಮರದ ಮೇಲೆ ಇಟ್ಟಿದ್ದ.

ಎಸ್ಎಸ್ಎಲ್‌ಸಿಯಲ್ಲಿ ಪಾಸಾದ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯ ಏಕೈಕ ವಿದ್ಯಾರ್ಥಿನಿ ಮೀನಾ (16) ತಲೆ ಕಡಿದು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಮೊಣ್ಣಂಡ ಪ್ರಕಾಶ್ ಯಾನೆ ಪಾಪು (34) ಆರೋಪಿಯನ್ನು ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದರು. ಇದೀಗ ಮೃತ ಬಾಲಕಿಯ ರುಂಡವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಹತ್ಯೆ ನಡೆದ ಅನತಿ ದೂರದಲ್ಲೇ ಬಾಲಕಿಯ ತಲೆ ಪತ್ತೆಯಾಗಿದೆ. ಬಾಲಕಿಯನ್ನು ಹತ್ಯೆ ಮಾಡಿದ ಬಳಿಕ ತಲೆಯನ್ನು ಆರೋಪಿ ಪ್ರಕಾಶ್ ಮರದ ಮೇಲಿರಿಸಿದ್ದ. ಇದೀಗ ಪೊಲೀಸರು ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಪ್ಲಾಸ್ಟಿಕ್ ಚೀಲದ ಬ್ಯಾಗಿಗೆ ಅಪ್ರಾಪ್ತೆಯ ತಲೆಯನ್ನು ಹಾಕಿಕೊಂಡಿದ್ದು, ಆರೋಪಿಯನ್ನು ಸ್ಥಳ ಮಹಜರ್ ಗೆ ಪೊಲೀಸರು ಕರೆದೊಯ್ದಿದ್ದಾರೆ. ನಿನ್ನೆ ಇಡೀ ದಿನ ಹುಡುಕಾಡಿದ್ದರೂ ಬಾಲಕಿ ಮೀನಾ ತಲೆ ಪತ್ತೆಯಾಗಿರಲಿಲ್ಲ. ನಿನ್ನೆ ಹುಡುಕಾಡಿದ್ದ ಸ್ಥಳದಲ್ಲೇ ಮರದ ಮೇಲೆ ಆರೋಪಿ ತಲೆ ಇರಿಸಿದ್ದ.

ಮನೆ ಬಳಿ ಮಹಜರು ಬಳಿಕ ಮರಣೋತ್ತರ ಪರೀಕ್ಷೆಗೆ ಪೊಲೀಸರು ತಲೆಯನ್ನು ಕೊಡಗು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಿದ್ದಾರೆ. ಬಾಲಕಿಯ ಮುಂಡಕ್ಕೆ ರುಂಡ ಹೊಂದಾಣಿಕೆ ಆಗುತ್ತಾ ಎಂದು ಪರಿಶೀಲನೆ ನಡೆಸಿ,ಹೊಂದಾಣಿಕೆ ಆದಲ್ಲಿ ಬಳಿಕ ಶವ ಪರೀಕ್ಷೆ ನಡೆಯಲಿದೆ.

ಕೊಡಗಿನ ಸೋಮವಾರಪೇಟೆಯ ಕುಂಬಾರಗಡಿಯಲ್ಲಿ ನಡೆದಿದ್ದ ಹತ್ಯೆ ಇದಾಗಿದ್ದು, ಇಡೀ ಜಿಲ್ಲೆಯೇ ಈ ಹತ್ಯೆಗೆ ಬೆಚ್ಚಿಬಿದ್ದಿದೆ. ಪ್ರಕರಣದ ಆರೋಪಿ ಪ್ರಕಾಶ್ ಬೆಳಗ್ಗೆ ಪೊಲೀಸರಿಗೆ ಶರಣಾಗಿದ್ದ, ಬಳಿಕ ಪೊಲೀಸರು ಬಂಧಿಸಿದ್ದರು. ಹತ್ಯೆ ಮಾಡಿದ್ದ ಸ್ಥಳದ ಸಮೀಪದಲ್ಲೇ ಮರವೊಂದರಲ್ಲಿ ಬಾಲಕಿಯ ತಲೆ ಇಟ್ಟಿರುವ ಮಾಹಿತಿ ನೀಡಿದ್ದ, ಹೀಗಾಗಿ ರುಂಡ ಪತ್ತೆಗಾಗಿ ಆತನನ್ನು ಘಟನಾ ಸ್ಥಳಕ್ಕೆ ಕರೆತಂದಿದ್ದರು. ಸ್ಥಳ ಮಹಜರು ನಡೆಸಿದಾಗ ರುಂಡ ಮರದಲ್ಲಿಟ್ಟಿರುವುದು ಪತ್ತೆಯಾಗಿದೆ.

Latest Indian news

Popular Stories