ಖಾಸಗಿ ಅನುದಾನರಹಿತ ತಾಂತ್ರಿಕ ಕಾಲೇಜುಗಳಲ್ಲಿ ಶೇ 10ರಷ್ಟು ಶುಲ್ಕ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ

ಬೆಂಗಳೂರು: ಖಾಸಗಿ ಅನುದಾನ ರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿನ ವೃತ್ತಿಪರ ಕೋರ್ಸ್‌ಗಳಿಗೆ ಶೇ 10ರಷ್ಟು ಶುಲ್ಕ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಇದು 2024-25ರ ಶೈಕ್ಷಣಿಕ ವರ್ಷಕ್ಕೆ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಿಗೆ ಅನ್ವಯವಾಗುತ್ತದೆ.

ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರ ಪ್ರಕಟಿಸಲಾಗಿದೆ.

2023ರಲ್ಲಿ ಕಾಂಗ್ರೆಸ್ ಸರ್ಕಾರವು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿನ ವೃತ್ತಿಪರ ಕೋರ್ಸ್‌ಗಳಿಗೆ ಶೇ 3 ರಷ್ಟು ಶುಲ್ಕ ಕಡಿತಗೊಳಿಸಿದ ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಶೇ 15 ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಕೋರಿತ್ತು. ಇದಕ್ಕೂ ಮೊದಲು, ಬಸವರಾಜ ಬೊಮ್ಮಾಯಿ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವರ್ಷದಿಂದ ವರ್ಷಕ್ಕೆ ಶೇ 10 ರಷ್ಟು ಶುಲ್ಕ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು.

2023-2024ರ ಶೈಕ್ಷಣಿಕ ವರ್ಷಕ್ಕೆ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿನ ಲಭ್ಯವಿರುವ ಮೂಲಸೌಕರ್ಯಗಳ ಆಧಾರದ ಮೇಲೆ ಜನರಲ್ ಮೆರಿಟ್ ಸೀಟುಗಳ ಶುಲ್ಕವನ್ನು ಟೈಪ್-1 ವಿಭಾಗದಲ್ಲಿ 96,574 ರೂ. ಮತ್ತು ಟೈಪ್-2 ವರ್ಗದ ಸಂಸ್ಥೆಗಳಿಗೆ 1,04,265 ರೂ.ಗಳಿಗೆ ಶುಲ್ಕವನ್ನು ಮಿತಿಗೊಳಿಸಲಾಗಿದೆ. ಈ ಶೈಕ್ಷಣಿಕ ವರ್ಷಕ್ಕೆ ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದ್ದು, ಸಿಇಟಿ ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಟೈಪ್-1 ವರ್ಗಕ್ಕೆ 1,06,231 ರೂ. ಮತ್ತು ಟೈಪ್-2 ವರ್ಗದ ಕಾಲೇಜುಗಳಿಗೆ 1,14,691 ರೂ. ಪಾವತಿಸಬೇಕಿರುತ್ತದೆ.

ಸರ್ಕಾರಿ ಕಾಲೇಜುಗಳಿಗೆ 2021-2022ರಲ್ಲಿ ಶೇ 3 ರಿಂದ 4 ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಶುಲ್ಕ ಹೆಚ್ಚಳ ಮಾಡುವ ಕುರಿತು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

Latest Indian news

Popular Stories