ಉಡುಪಿ | ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆಯನ್ನು ಯಥಾಸ್ಥಿತಿ ಕಾಪಾಡುವಂತೆ ಕೋರಿ ಪ್ರಾಂಶುಪಾಲರಿಂದ ಮನವಿ

ಉಡುಪಿ: ಗುಣಾತ್ಮಕ ಮತ್ತು ಸ್ಪರ್ಧಾತ್ಮಕ ಶಿಕ್ಷಣಕ್ಕೆ ದೇಶದಲ್ಲಿಯೇ ಮಾದರಿಯಾಗಿದ್ದ ಪದವಿ ಪೂರ್ವ
ಶಿಕ್ಷಣ ಇಲಾಖೆಯ ಅಸ್ಮಿತೆಯನ್ನು ಯಥಾಸ್ಥಿತಿ ಕಾಪಾಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಸಂಘದ ವತಿಯಿಂದ ಉಡುಪಿ ‌ಜಿಲ್ಲಾಧಿಕಾರಿ ಮುಖೇನಾ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

IMG 20231123 WA0082 Education

ಮನವಿಯಲ್ಲಿ ಶೈಕ್ಷಣಿಕ ಕ್ಷೇತ್ರದ ಸುಪ್ರಸಿದ್ಧ, ಕೊಠಾರಿ ಆಯೋಗದ ಶಿಫಾರಸ್ಸಿನಂತೆ +2 ಹಂತವನ್ನು ರಾಜ್ಯದಲ್ಲಿ ಅಳವಡಿಸುವ ಸಲುವಾಗಿ ಪಿ.ಮಲ್ಲಿಕಾರ್ಜುನಪ್ಪನವರ ನೇತೃತ್ವದ ಸಮಿತಿಯು ನೀಡಿದ ವರದಿಯ ಆಧಾರದ ಮೇಲೆ 1971ರ ಜನವರಿಯಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿಯು ಅಸ್ತಿತ್ವಕ್ಕೆ ಬಂದಿರುತ್ತದೆ. ಮುಖ್ಯ ಮಂತ್ರಿಗಳಾಗಿದ್ದ ದಿವಂಗತ ಎಸ್.ಬಂಗಾರಪ್ಪನವರ ಹಾಗೂ ಶಿಕ್ಷಣ ಸಚಿವರಾಗಿದ್ದ ಸನ್ಮಾನ ವೀರಪ್ಪ ಮೊಯ್ಲಿ ಅವರ ದೂರದೃಷ್ಟಿ ಹಾಗೂ ಬದ್ಧತೆಯ ಫಲವಾಗಿ ಜೂನ್, 1992 ರಂದು ಸ್ವತಂತ್ರ ಪದವಿ ಪೂರ್ವ ಶಿಕ್ಷಣ (ಪಪೂಶಿ) ಇಲಾಖೆರೂಪುಗೊಂಡಿತು. ಹೀಗೆ ರೂಪುಗೊಂಡ ಪಪೂಶಿ ಇಲಾಖೆಯು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಹಂತಗಳ ನಡುವೆ ಒಂದು ಸೇತುವಾಗಿ ಗುಣಾತ್ಮಕ ಹಾಗೂ ಸ್ಪರ್ಧಾತ್ಮಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ರಾಷ್ಟ್ರದಲ್ಲಿಯೇ ಮಾದರಿಯಾದ ಶೈಕ್ಷಣಿಕ ವ್ಯವಸ್ಥೆ ಎಂಬ ಕೀರ್ತಿಗೆ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ ಪಾತ್ರವಾಗಿದ್ದು, ಹೊರ ರಾಜ್ಯಗಳ ಶಿಕ್ಷಣ ತಜ್ಞರು ಆಗಮಿಸಿ, ನಮ್ಮ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ನಡೆಸಿ ಹೋಗಿರುವುದು ನಮ್ಮೆಲ್ಲರಿಗೂ ಹಮ್ಮೆಯ ವಿಷಯವಾಗಿದೆ. ನಮ್ಮ ಸಿ.ಇ.ಟಿ.ಗಳಲ್ಲಿ ಯಶಸ್ಸನ್ನು ಸಾಧಿಸಿದವರು ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ಉನ್ನತ ಸ್ಥಾನಗಳನ್ನಲಂಕರಿಸಿ, ಕಾರ್ಯನಿರ್ವಹಿಸುತ್ತಿದ್ದಾರೆ.

ಮೌಲ್ಯ ಮತ್ತು ಅಸ್ಮಿತೆಯನ್ನು ಹೊಂದಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಹಂತ ಹಂತವಾಗಿ
ಕೊಲ್ಲುವ ಪುಯತ್ನಗಳು ಪುಸ್ತುತ ನಡೆಯುತ್ತಿರುವುದು ದುರಾದೃಷ್ಟಕರ ಎಲ್ಲಾ ವರ್ಗದ ಬಡ ಮಕ್ಕಳಿಗೂ
ಗುಣಾತ್ಮಕ ಮತ್ತು ಮೌಲಿಕ ಶಿಕ್ಷಣ ದೊರಕುವಂತಾಗಲಿ ಎಂಬ ಬಂಗಾರಪ್ಪನವರ ಆಶಯದ ಫಲವಾಗಿ ರೂಪುಗೊಂಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಇಂದು ಅವರ ಮಗ ಮಧು ಬಂಗಾರಪ್ಪ ಸಚಿವರಾಗಿದ್ದೂ ಕೂಡ ಇಲಾಖೆಯ ಶವಪಟ್ಟಿಗೆಗೆ ಮೊಳೆ ಹೊಡೆಯುತ್ತಿರುವುದು ವಿಷಾದಕರ ಎಂದು ಉಲ್ಲೇಖಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಎಂದು ಹೆಸರು
ಬದಲಿಸಲಾಗಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಪಿ.ಯು., ಹಂತವನ್ನು
ಪ್ರೌಢಶಾಲೆಗಳಲ್ಲಿ ವಿಲೀನಗೊಳಿಸುವ ಪ್ರಕ್ರಿಯ ಹಿಂದಿನಿಂದಲೂ ನಡೆಯುತ್ತಿದೆ. ಇದನ್ನು ಕೂಡಲೇ
ಕೈಬಿಟ್ಟು, ಪದವಿ ಪೂರ್ವ ಶಿಕ್ಷಣ ಇಲಾಖೆ ಎಂಬ ಹೆಸರನ್ನೇ ಹಿಂದಿನಂತೆ ಯಥಾಸ್ಥಿತಿಯಲ್ಲಿಯೇ
ಇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಮನವಿಯೊಂದಿದೆ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಗಿದೆ.

1.ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನಗೊಳಿಸಿರುವ ಪರೀಕ್ಷಾ
ವಿಭಾಗವನ್ನು ಹಿಂತೆಗೆದು ಪುನಃ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿಯೇ ಉಳಿಸುವ ಮೂಲಕ ಶೈಕ್ಷಣಿಕ
ವಿಭಾಗ ಮತ್ತು ಪರೀಕ್ಷಾ ವಿಭಾಗಗಳ ನಡುವೆ ಹಳಿತಪ್ಪಿರುವ ಸಮನ್ವಯವನ್ನು ಮರುಸ್ಥಾಪಿಸಬೇಕು.
ಅಲ್ಲದೆ, ಕುಸಿಯುತ್ತಿರುವ ಪರೀಕ್ಷಾ ಮೌಲ್ಯ, ಪಾವಿತ್ರ್ಯತೆಯನ್ನು ಎತ್ತಿಹಿಡಿಯಬೇಕು.

2.ಪ್ರತಿ ಜಿಲ್ಲಾ ಹಂತಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೇಲುಸ್ತುವಾರಿ ನಡೆಸುವ
ಸಂಬಂಧ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮತ್ತು ಅಪರ ಆಯುಕ್ತರು
ಶಾಲಾ ಶಿಕ್ಷಣ ಇಲಾಖೆ ಇವರಿಗೆ ವಹಿಸಲು ಸರ್ಕಾರದ ಅಧೀನ ಕಾರ್ಯದರ್ಶಿಗಳು ದಿನಾಂಕ: 18.10.2023
ರಂದು ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಇದರಿಂದ ಸರಾಗವಾಗಿ
ನಡೆಯುತ್ತಿರುವ ಇಲಾಖೆಯ ಚಟುವಟಿಕೆಗಳು ಸಂಕೀರ್ಣಗೊಂಡು, ವಿಳಂಬನೀತಿಗೆ
ಕಾರಣವಾಗಬಹುದು. ಜಿಲ್ಲಾ ಉಪನಿರ್ದೇಶಕರ ಕಛೇರಿಯ ಆಡಳಿತ, ಶೈಕ್ಷಣಿಕ, ಪರೀಕ್ಷೆ, ಲೆಕ್ಕಪತ್ರ
ಹಾಗೂ ಇತರ ಕಾರ್ಯಚಟುವಟಿಕೆಗಳನ್ನು ಸುಗಮ ಹಾಗೂ ಸುಲಲಿತವಾಗಿ ನಡೆಸಲು ಜಿಲ್ಲಾ
ಉಪನಿರ್ದೇಶಕರ ಕಛೇರಿಗೆ, (ಆಡಳಿತ),( ಶೈಕ್ಷಣಿಕ ಹಾಗೂ ಇತರೆ) (ಪರೀಕ್ಷೆ) ನಿರ್ವಹಣೆಗಳಿಗಾಗಿ ಕಛೇರಿ
ಅಧೀಕ್ಷಕರು -3 ಹುದ್ದೆಗಳು, ಪ್ರಥಮ ದರ್ಜೆ ಸಹಾಯಕರು-6 ಹುದ್ದೆಗಳು, ದ್ವಿತೀಯ ದರ್ಜೆ
ಸಹಾಯಕರು- 6 ಹುದ್ದೆಗಳು, ಗ್ರೂಪ್-ಡಿ- 3 ಹುದ್ದೆಗಳನ್ನು ಮಂಜೂರು ಮಾಡುವುದರ ಮುಖಾಂತರ ಜಿಲ್ಲಾ ಉಪನಿರ್ದೇಶಕರ ಕಚೇರಿಯನ್ನು ಬಲಪಡಿಸುವುದು. ಹಾಗೆಯೇ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಅಧಿಕ್ಷಕರು, ಪುದಸ, ದ್ವಿದಸ ಹಾಗೂ ಗ್ರೂಪ್-ಡಿ ಹುದ್ದೆಗಳನ್ನು ಮಂಜೂರಿಸಿ, ಪದವಿ ಪೂರ್ವ ಶಿಕ್ಷಣವನ್ನು ಬಲಪಡಿಸುವುದು.

ಸರ್ಕಾರವು ಯಾವುದೇ ಶಿಕ್ಷಕ/ಶಿಕ್ಷಕೇತರ ಸಂಘಟನೆಗಳ ಜೊತೆಗಾಗಲಿ, ಶಿಕ್ಷಣ ತಜ್ಞರ ಜೊತೆಗಾಗಲಿ ಸಾಧಕ-ಬಾಧಕಗಳನ್ನು ಕುರಿತು ಚರ್ಚೆ, ಸಮಾಲೋಚನೆಗಳನ್ನು ನಡೆಸದೆ ಏಕಾಏಕಿ ಪಿಯು
ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿರುವುದು ಸಂಪೂರ್ಣ ಅವೈಜ್ಞಾನಿಕ
ಮತ್ತು ಅತಾರ್ಕಿಕ ನಿರ್ಧಾರವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ
ಕುಸಿಯುವುದು ಮಾತ್ರವಲ್ಲ; ಓದಿನ ಬಗೆಗೆ ತಾತ್ಸರಾ ಬೆಳೆಯುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ
ಮಾರಕವಾಗಿರುವ ಈ ಪದ್ಧತಿಯಿಂದ ನೈಜ ಮೌಲ್ಯಮಾಪನ ಸಾಧ್ಯವಾಗುವುದಿಲ್ಲ. ಈ ವಿಧಾನದಿಂದ ಋಣಾತ್ಮಕ ಫಲಿತಾಂಶ ದೊರಕುತ್ತದೆಯೇ ವಿನಃ ಗುಣಾತ್ಮಕ ಫಲಿತಾಂಶವಲ್ಲ! ಜೊತೆಗೆ ಉಪನ್ಯಾಸಕರು ಶೈಕ್ಷಣಿಕ ವರ್ಷಾರಂಭದ ಕೆಲವು ತಿಂಗಳು ದಾಖಲಾಗಿರುವ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವುದನ್ನು ಬಿಟ್ಟು, ಹಳೆಯ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಮೌಲ್ಯಮಾಪನ
ಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ. ಇಷ್ಟೇ ಅಲ್ಲದೆ, ಸಂಪೂರ್ಣ ಬೇಸಿಗೆ ರಜೆಯನ್ನು ಉಪನ್ಯಾಸಕರು
ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ರಜೆ ರಹಿತ
ಇಲಾಖೆಯನ್ನಾಗಿ ಘೋಷಿಸಿ, ಇತರ ಸವಲತ್ತುಗಳನ್ನು ನೀಡಬೇಕೆಂದು ಕೋರುತ್ತೇವೆ.

ಈ ಮೇಲಿನ ವಿಷಯಗಳಲ್ಲಿ ಸರ್ಕಾರ ಸಕಾಲದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದೇ ಹೋದಲ್ಲಿ
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಮತ್ತು
ಬೋಧಕೇತರ ಸಂಘಗಳ ಒಕ್ಕೂಟವು ಮುಂಬರುವ ಡಿಸೆಂಬರ್ 1 ರಂದು ಬೆಂಗಳೂರಿನ ಸ್ವಾತಂತ್ರ್ಯ
ಉದ್ಯಾನದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಾಂಶುಪಾಲರರ ಸಂಘ,
ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ವರ್ಗಿಸ್ ಮತ್ತು ಬೋಧಕೇತರ ನೌಕರರ ಸಂಘ,ಪದವಿ ಪೂರ್ವ ಶಿಕ್ಷಣ ಇಲಾಖೆ
ಉಡುಪಿ ಜಿಲ್ಲೆಯ ಅಧ್ಯಕ್ಷರಾದ ವದಿರಾಜ್ ಸೇರಿದಂತೆ ಹಲವು ಮಂದಿ ಪ್ರಾಂಶುಪಾಲರು ಉಪಸ್ಥಿತರಿದ್ದರು.

Latest Indian news

Popular Stories