ನಂದಿಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ

ಮಡಿಕೇರಿ ಜ. ೧೩ : ಸುಮಾರು ೩೦ ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಹೊಂದಿರುವ ಬೃಹತ್ ಕೆರೆ ಹೂಳು ತುಂಬಿದ್ದು, ಹೆಚ್ಚಿನ ನೀರು ಸಂಗ್ರಹಣೆ ದೃಷ್ಟಿಯಿಂದ ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿದರು.
ರೂ. ೭೫ ಲಕ್ಷ ವೆಚ್ಚದಲ್ಲಿ ಕೊಡ್ಲಿಪೇಟೆ ಸಮೀಪದ ನಂದಿಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಸಣ್ಣ ನೀರಾವರಿ ಇಲಾಖೆ ಮೂಲಕ ಕಾಮಗಾರಿ ಕೈಗೊಳ್ಳಲಾಗಿದ್ದು, ಹೂಳು ತೆಗೆಯುವುದು, ಕಾಡು ಕಡಿಯುವುದು, ಕೆರೆ ಏರಿ ಕುಸಿಯದಂತೆ ತಡೆಗೋಡೆ ನಿರ್ಮಿಸುವುದು, ಸೋಪಾನಕಟ್ಟೆ ಅಭಿವೃದ್ಧಿ, ತೂಬು ಅಭಿವೃದ್ಧಿ, ಗೇಟು ಅಳವಡಿಸುವುದು, ಕೆರೆ ಕೊಡಿ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳು ನಡೆಯಲಿವೆ ಎಂದರು.
ಕೊಡ್ಲಿಪೇಟೆ ಭಾಗದಲ್ಲಿರುವ ಬೃಹತ್ ಹಾಗೂ ಉತ್ತಮವಾದ ಕೆರೆ ಇದಾಗಿದ್ದು, ಗ್ರಾಮಸ್ಥರಿಗೆ ಹಾಗೂ ಕೃಷಿಕರಿಗೆ ಅನುಕೂಲವಾಗಲಿದೆ. ಅಲ್ಲದೇ ಕೆರೆಯ ಸುತ್ತಾ ವಾಯು ವಿಹಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದೆಂದರು.
ಈ ಸಂದರ್ಭ ಕೊಡಗು ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ ಅಧ್ಯಕ್ಷೆ ಪುಷ್ಪರಾಜೇಶ್, ಪ್ರಮುಖರಾದ ಮೋಕ್ಷಿತ್, ನಾಗರಾಜ್, ಭಗವಾನ್, ಯತೀಶ್, ನಾಗೇಶ್, ವರಪ್ರಸಾದ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲ ಅಭಿಯಂತರ ರಫೀಕ್ ಸೇರಿದಂತೆ ವಿವಿಧ ಅಧಿಕಾರಿಗಳು, ಪಕ್ಷದ ಪ್ರಮುಖರು ಹಾಜರಿದ್ದರು.

Latest Indian news

Popular Stories