ವರದಿ: ಸಮೀವುಲ್ಲಾ ಉಸ್ತಾದ
ವಿಜಯಪುರ: ವಿಜಯಪುರ ವಿಧಾನಸಭಾ ಕ್ಷೇತ್ರದಿಂದ ಇಲ್ಲಿಯವರೆಗೆ ಹ್ಯಾಟ್ರಿಕ್ ಗೆಲುವಿನ ದಾಖಲೆ ಯಾರೂ ಬರೆದಿಲ್ಲ. ಹ್ಯಾಟ್ರಿಕ್ ಒಂದೆಡೆ ಇರಲಿ ಪುನರಾಯ್ಕೆಯಾಗಿದ್ದು ಮಾಜಿಸಚಿವರಾದ ದಿ.ಎಂ.ಎಲ್. ಉಸ್ತಾದ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತ್ರ.
1957ರಲ್ಲಿ ರಚನೆಯಾದ ವಿಜಯಪುರ ವಿಧಾನಸಭಾ ಕ್ಷೇತ್ರದಿಂದ 1989 ರವರೆಗ ನಡೆದ ಚುನಾವಣೆಯಲ್ಲಿ ಯಾರೊಬ್ಬರು ಪುನರಾಯ್ಕೆಯಾಗಿರಲಿಲ್ಲ. 1985 ರಲ್ಲಿ ಕಾಂಗ್ರೆಸ್ ಪಕ್ಷದಿಂದ ದಿ.ಎಂ.ಎಲ್. ಉಸ್ತಾದ ಆಯ್ಕೆಯಾದರು, ಪುನ: 1989 ರಲ್ಲಿಯೂ ಆಯ್ಕೆಯಾಗುವ ಮೂಲಕ ಪುನರಾಯ್ಕೆಯಾದ ಪ್ರಥಮ ಶಾಸಕ ಎಂಬ ಶ್ರೇಯಸ್ಸಿಗೆ ಪಾತ್ರರಾದರು.
ದಿ.ಉಸ್ತಾದ ಅವರು 1994 ರಲ್ಲಿ ಹ್ಯಾಟ್ರಿಕ್ ಸಾಧನೆ ಹೊಸ್ತಿಲಲ್ಲಿದ್ದರು, ಆದರೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ, ಅದರ ನಂತರದ ಅಂದರೆ 1999ರ ಚುನಾವಣೆಯಲ್ಲಿ ಆಯ್ಕೆಯಾದರಾದರು ಆದರೆ ದಿ.ಉಸ್ತಾದ ಅವರು ಮೂರು ಬಾರಿ ಶಾಸಕರಾಗಿದ್ದಾರೆ ಹೊರತು ಹ್ಯಾಟ್ರಿಕ್ ಸಾಧನೆ ದಾಖಲೆ ಬರೆಯಲಿಲ್ಲ. ತದನಂತರ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರಿಗೂ ಈ ದಾಖಲೆ ಬರೆಯುವ ಯೋಗ ಕೂಡಿ ಬಂದಿತ್ತು. ಆದರೆ 2013 ರ ಚುನಾವಣೆಯಲ್ಲಿ ಪರಾಭವಗೊಂಡ ಪರಿಣಾಮ ಅವರಿಗೂ ಈ ದಾಖಲೆ ದೂರವಾಯಿತು. ಹೀಗಾಗಿ ಈ ಹ್ಯಾಟ್ರಿಕ್ ದಾಖಲೆ ಮುರಿಯಲು ಇನ್ನೂ ವರ್ಷಗಳೇ ಬೇಕು.
1957ರಲ್ಲಿ ರಚನೆಯಾದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಮತದಾರ ಮೊದಲು ಆಶೀರ್ವದಿಸಿದ್ದು ಪಕ್ಷೇತರ ನಾಯಕರನ್ನು. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸರ್ದಾರ್ ಬಸವರಾಜ ನಾಗೂರ ಪಕ್ಷೇತರರಾಗಿ ಆಯ್ಕೆ ಯಾಗಿ ವಿಜಯಪುರ ನಗರದ ಪ್ರಥಮ ಶಾಸಕರಾಗಿ ಆಯ್ಕೆಯಾದರು.
ಕಾಂಗ್ರೆಸ್ ಪಕ್ಷ ಏಳು ಬಾರಿ ಇಲ್ಲಿ ಖಾತೆ ತೆರದರೆ, ಬಿಜೆಪಿ ಐದು ಬಾರಿ, ಜನತಾ (ಜೆಎನ್ಪಿ) ಒಂದು ಬಾರಿ ಖಾತೆ ತೆರೆದಿದೆ. ಪಕ್ಷೇತರರು ಸಹ ಒಂದು ಬಾರಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಿಂದ ರೇವಣಸಿದ್ಧ ಶರಣಪ್ಪ ನಾವದಗಿ ಅವರು ಕಾಂಗ್ರೆಸ್ ಪ್ರಥಮ ಶಾಸಕರು, ಅದೇ ತೆರನಾಗಿ ಚಂದ್ರಶೇಖರ ಗಚ್ಚಿನಮಠ ಬಿಜೆಪಿ ಖಾತೆ ತೆರೆದವರು.
ಮಹಿಳೆಯರ ಸ್ಪರ್ಧೆ ಅಪರೂಪ
ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಸ್ಪರ್ಧೆ ಮಾಡಿದ್ದಾರೆ. ಬಹುತೇಕ ಚುನಾವಣೆಗಳಲ್ಲಿ ಮಹಿಳಾ ಸ್ಪರ್ಧಿಗಳೇ ಇರಲಿಲ್ಲ. ಅದರಲ್ಲೂ ರಾಜಕೀಯ ಪಕ್ಷಗಳಿಂದ ಮಹಿಳೆ ಸ್ಪರ್ಧಿಸಿಯೇ ಇಲ್ಲದ್ದನ್ನು ಇಲ್ಲಿ ಗಮನಿಸಬಹುದು.
1957 ರಲ್ಲಿ ರಚನೆಯಾದ ಈ ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ 1983 ರಲ್ಲಿ ಸುಧಾಬಾಯಿ ವಿಷ್ಣುಪಂಥ ಪಾಠಕ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ನಂತರ 1985 ರ ಚುನಾವಣೆಯಲ್ಲಿ ನಜಮಾ ಬಾಂಗಿ ಪಕ್ಷೇತರರಾಗಿ, 1994 ರಲ್ಲಿ ಪುನ: ನಜಮಾ ಬಾಂಗಿ ಪಕ್ಷೇತರರಾಗಿ ಸ್ಪರ್ಧೆ ಹಾಗೂ ನಂತರ 2008 ರಲ್ಲಿ ಜರೀಜ್ ಫೈರೋಜ್ ಶೇಖ್, 2013 ರಲ್ಲಿ ನಿರ್ಮಲಾ ಅರಕೇರಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದು ಬಿಟ್ಟರೆ ಮಹಿಳೆಯರ ಸ್ಪರ್ಧೆ ಬಲು ಅಪರೂಪ.
ವಿಜಯಪುರ ಕ್ಷೇತ್ರದ ಮತದಾರ ಮಾಹಿತಿ:
ವಿಜಯಪುರ ನಗರ ಮತಕ್ಷೇತ್ರದಲ್ಲಿ ಒಟ್ಟು 2,77,748 ಮತದಾರರಿದ್ದು. ಇದರಲ್ಲಿ 140056 ಮಹಿಳಾ ಮತಾದರರು, 137599 ಪುರುಷ ಮತದಾರರು ಹಾಗೂ 93 ಇತರೆ ಮತದಾರರು ಇದ್ದಾರೆ.
ವಿಜಯಪುರ ಪ್ರತಿನಿಧಿಸಿದ ಶಾಸಕರು
1957 – ಡಾ.ಸರ್ದಾರ ಬಸವರಾಜ ನಾಗೂರ (ಪಕ್ಷೇತರ)
1962 – ರೇವಣಸಿದ್ಧಪ್ಪ ಶರಣಪ್ಪ ನಾವದಗಿ (ಕಾಂಗ್ರೆಸ್)
1967 – ಬಿ.ಎಂ. ಪಾಟೀಲ (ಕಾಂಗ್ರೆಸ್)
1972 – ಕೆ.ಟಿ. ರಾಠೋಡ (ಕಾಂಗ್ರೆಸ್)
1978 – ಎಸ್ಎಚ್ಎಸ್ ಭಕ್ಷಿ (ಜೆಎನ್ಪಿ)
1983 – ಚಂದ್ರಶೇಖರ ಗಚ್ಚಿನಮಠ (ಬಿಜೆಪಿ)
1985 – ಎಂ.ಎಲ್. ಉಸ್ತಾದ (ಕಾಂಗ್ರೆಸ್)
1989 – ಎಂ.ಎಲ್. ಉಸ್ತಾದ (ಕಾಂಗ್ರೆಸ್)
1994 – ಬಸನಗೌಡ ಪಾಟೀಳ ಯತ್ನಾಳ (ಬಿಜೆಪಿ)
1999 – ಎಂ.ಎಲ್. ಉಸ್ತಾದ (ಕಾಂಗ್ರೆಸ್)
2004 – ಅಪ್ಪಾಸಾಹೇಬ ಪಟ್ಟಣಶೆಟ್ಟಿ (ಬಿಜೆಪಿ)
2008 – ಅಪ್ಪಾಸಾಹೇಬ ಪಟ್ಟಣಶೆಟ್ಟಿ (ಬಿಜೆಪಿ)
2013 – ಡಾ.ಮಕ್ಬೂಲ್ ಬಾಗವಾನ (ಕಾಂಗ್ರೆಸ್)
2018 – ಬಸನಗೌಡ ಪಾಟೀಲ ಯತ್ನಾಳ (ಬಿಜೆಪಿ)