ವಾರಣಾಸಿಯಲ್ಲಿ ಇವಿಎಮ್’ಗಳ ಅಕ್ರಮ ಸಾಗಾಟ – ಅಖಿಲೇಶ್ ಯಾದವ್ ಗಂಭೀರ ಆರೋಪ

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಎರಡು ದಿನ ಬಾಕಿ ಇರುವಾಗಲೇ ವಾರಣಾಸಿಯ ಮತ ಎಣಿಕೆ ಕೇಂದ್ರದಿಂದ ಇವಿಎಂಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಸಾಗಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಗಂಭೀರ ಆರೋಪ ಮಾಡಿದ್ದಾರೆ.

ಮತ ಎಣಿಕೆ ಕೇಂದ್ರದಿಂದ ಇವಿಎಂ ತೆಗೆದುಕೊಂಡು ಹೋಗಿರುವ ಸಂಬಂಧ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್‌ ಯಾದವ್‌, ವಾರಣಾಸಿಯ ಡಿಎಂ ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಮತಗಟ್ಟೆಗಳಿಂದ ಇವಿಎಂ ಸಾಗಿಸುತ್ತಿದ್ದಾರೆ. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.

ಇವಿಎಂಗಳನ್ನು ಈ ರೀತಿ ಸಾಗಿಸುತ್ತಿದ್ದರೆ ನಾವು ಎಚ್ಚರದಿಂದಿರಬೇಕು. ಇದು ಕಳ್ಳತನ. ನಮ್ಮ ಮತಗಳನ್ನು ಉಳಿಸಬೇಕು. ನಾವು ಇಂತಹ ಘಟನೆಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಅದಕ್ಕೂ ಮೊದಲು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಜನರಲ್ಲಿ ಮನವಿ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷ ಗೆಲ್ಲುತ್ತದೆ. ಹೀಗಾಗಿ ಬಿಜೆಪಿಗೆ ಭಯವಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಇವಿಎಂಗಳನ್ನು ಟ್ಯಾಂಪರಿಂಗ್‌ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲ್ಲುತ್ತದೆ ಎಂಬ ಗ್ರಹಿಕೆಯನ್ನು ಸೃಷ್ಟಿಸಲು ಬಯಸುತ್ತವೆ. ಇದು ಪ್ರಜಾಪ್ರಭುತ್ವದ ಹೋರಾಟವಾಗಿದೆ. ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಇವಿಎಂ ಸಾಗಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Latest Indian news

Popular Stories