ಉತ್ತರ ಕನ್ನಡ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ಸಗೆ ಮತ್ತೆ ಗೆಲುವಿನ ಆಶಯ – ಬಿಜೆಪಿಗೆ ಅಂತರ ಕಡಿಮೆಯಾದರೂ ಗೆಲುವಿನ ವಿಶ್ವಾಸ

ವಿಶ್ಲೇಷಣೆ

ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ
ಕಾಂಗ್ರೆಸ್ಸಗೆ ಮತ್ತೆ ಗೆಲುವಿನ ಆಶಯ ಇಮ್ಮಡಿಸ ತೊಡಗಿದೆ. ಬಿಜೆಪಿಗೆ ಗೆಲುವಿನ ಅಂತರ ಕಡಿಮೆಯಾದರೂ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದೆ‌.

ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಈ ಬಾರಿ ಗೆಲ್ಲುವ ಸಾಧ್ಯತೆಯೇ ಹೆಚ್ಚು ಎಂಬ ಮಾತು ಕಾಂಗ್ರೆಸ್ ನಲ್ಲಿದೆ. ಈ ಬಾರಿ ಗೆಲ್ಲುವ ಅಭ್ಯರ್ಥಿಗೆ 6.30 ಲಕ್ಷ ಮತಗಳು ಬೇಕಾಗಿವೆ.
ಇದರಲ್ಲಿ 2.6 ಲಕ್ಷ ಅಲ್ಪಸಂಖ್ಯಾತ ಮತ ಚಲಾವಣೆಯಾಗಿದ್ದು , ಇದರಲ್ಲಿ 2.5 ಲಕ್ಷ ಮತಗಳನ್ನು ಕಾಂಗ್ರೆಸ್ ಪಕ್ಷವೇ ಪಡೆಯಲಿದೆ ಎಂಬ ವಿಶ್ವಾಸ ಆ ಪಕ್ಷದ್ದು.

1 ಲಕ್ಷ ಮರಾಠ ಮತದಾರರು, 60 ಸಾವಿರ ಹಾಲಕ್ಕಿಗಳು, 1 ಲಕ್ಷ ನಾಮಧಾರಿ, ಈಡಿಗ ಮತಗಳು ಹಾಗೂ 80 ಸಾವಿರ ದಲಿತ ಮತ ಕಾಂಗ್ರೆಸ್ ಕೈ ಹಿಡಿಯಲಿವೆ ಎಂಬುದು ಕಾಂಗ್ರೆಸ್ ನವರ ಲೆಕ್ಕಾಚಾರ.

ಉಳಿದಂತೆ ಸುಮಾರು 1.5 ಲಕ್ಷ ಇತರೇ ವರ್ಗ ,ಸಮುದಾಯಗಳ ಮತಗಳು , ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿಗಳ ಪರ ಬಹುತೇಕ ಹೆಣ್ಮಕ್ಕಳು ಮತ ಚಲಾವಣೆಯಾದರೆ, ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ನವರು ಮುಂದಿಡುತ್ತಿದ್ದಾರೆ.

ಶಿರಸಿ, ಭಟ್ಕಳ, ಕಾರವಾರ, ಹಳಿಯಾಳ, ಕಿತ್ತೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ.ಇದು ಸಹ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಿದೆ. ಬಿಜೆಪಿಯ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ತಟಸ್ಥರಾಗಿ ಉಳಿದದ್ದು, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ಪರವಾಗಿ ಕೆಲಸ ಮಾಡದೆ ಹೋದದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಗೆ ಬೋನಸ್ ಆಗಿದೆ. ಅಲ್ಲದೇ ಯಲ್ಲಾಪುರ ಶಾಸಕ ಹೆಬ್ಬಾರರ ಮಗ ವಿವೇಕ ಹೆಬ್ಬಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ, ಕಾಂಗ್ರೆಸ್ ಪರ ಕೆಲಸ ಮಾಡಿದ್ದು, ಕಾಂಗ್ರೆಸ್ ಪಕ್ಷ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಮರಳಿ ಪಡೆಯುವ ವಿಶ್ವಾಸದಲ್ಲಿದೆ.

ಬಿಜೆಪಿ ಸಹ ಕೈಕಟ್ಟಿ ಕುಳಿತಿರಲಿಲ್ಲ :

ಬಿಜೆಪಿ ಕ್ಷೇತ್ರವಾರು ಪಕ್ಷದ ಪ್ರಮುಖರ ಸಭೆ ನಡೆಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದೆ‌ . ಕುಮಟಾ, ಖಾನಾಪುರ, ಯಲ್ಲಾಪುರದಲ್ಲಿ ಬಿಜೆಪಿ ಶಾಸಕರನ್ನು ಹೊಂದಿದೆ. ಯಲ್ಲಾಪುರದಲ್ಲಿ ಪಕ್ಷದ ಮೂಲ ಕಾರ್ಯಕರ್ತರು ಹಾಗೂ ಲೋಕಸಭಾ ಕ್ಷೇತ್ರದ ಬಿಜೆಪಿ
ಕಾರ್ಯಕರ್ತರನ್ನು ನಂಬಿದ್ದ ಬಿಜೆಪಿ , ಅನಂತ ಹೆಗಡೆ ಅಭ್ಯರ್ಥಿ ಬದಲಿಸಿದ್ದು, ವರದಾನ ಎನ್ನುತ್ತಿದೆ. ಮೋದಿಯೇ ಅಭ್ಯರ್ಥಿ ಎಂದು ಬಿಜೆಪಿ ಬಿಂಬಿಸಿದೆ. ತನ್ನ ಹಿಂದಿನ ತಂತ್ರಗಾರಿಕೆಯಾದ ಹಿಂದುತ್ವ ಅಜೆಂಡಾ , ರಾಷ್ಟ್ರೀಯ ವಿಚಾರ ಪ್ರತಿಪಾದನೆಗೆ ಮತ ಬರುತ್ತವೆ ಎಂಬುದು ಬಿಜೆಪಿಗರ ವಾದ. ಅಭಿವೃದ್ಧಿ ಮಾಡುವುದಾಗಿ ಹೇಳಿದ್ದರೂ ನಿರ್ದಿಷ್ಟ ಯೋಜನೆಗಳನ್ನು ಅಥವಾ ಮತದಾರರಿಗೆ ಏನು ಕೊಡುತ್ತೇವೆ ಎಂದು ಭರವಸೆ ನೀಡಿಲ್ಲ. ವಾಸ್ತವವಾಗಿ ಬಿಜೆಪಿ ಗ್ಯಾರಂಟಿ ಯೋಜನೆಗಳ ವಿರುದ್ಧ ಇದೆ. ಮತ್ತು ಬಿಟ್ಟಿಯಾಗಿ ಬಡವರಿಗೆ ಏನೂ ಕೊಡಬಾರದು ಎಂಬ ವಾದಕ್ಕೆ ಅಂಟಿಕೊಂಡಿದೆ. ಹಿಂದಿನ ಸಂಸದ ಅನಂತ ಕುಮಾರ್ ಪ್ರಚಾರಕ್ಕೆ ಬಾರದಿದ್ದರೂ, ಅವರನ್ನು ಟೀಕೆ ಮಾಡದೆ ಅವರ ಒಳ ಬಂಡಾಯದ ಮತಗಳು ನೋಟಾಕ್ಕೆ ಹೋಗದಂತೆ ನೋಡಿಕೊಳ್ಳಲಾಗಿದೆ ಎಂದು ಬಿಜೆಪಿ ಕಟ್ಟಾ ಕಾರ್ಯಕರ್ತರ ತರ್ಕ. ಯಲ್ಲಾಪುರ ಬಿಜೆಪಿ ಶಾಸಕ ಹೆಬ್ಬಾರ್ ಕಮಲದಿಂದ ದೂರವೇ ಉಳಿದರೂ , ಅದನ್ನು ಲೆಕ್ಕಕ್ಕೆ ಇಲ್ಲದಂತೆ ವರ್ತಿಸಿದೆ. ಶಿವರಾಮ ಹೆಬ್ಬಾರರನ್ನು ಹಿಗ್ಗಾಮುಗ್ಗ ಟೀಕಿಸಿದೆ. ಇದರ ಪರಿಣಾಮ ಕಾದು ನೋಡಬೇಕಿದೆ . ಪ್ರಧಾನಿ ಮೋದಿಯನ್ನೇ ನಂಬಿ ಮತಬುಟ್ಟಿಯತ್ತ ಬಿಜೆಪಿ ಕಣ್ಣಿಟ್ಟಿದೆ. ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಅಭ್ಯರ್ಥಿ ಕಾಗೇರಿ ಗೆಲುವು ಖಚಿತ ಎಂದಿದ್ದಾರೆ. ಗೆಲುವಿನ ಅಂತರ 2019 ರ ಫಲಿತಾಂಶಕ್ಕಿಂತ ಕಡಿಮೆಯಾಗಲಿದೆ ಎಂದು ಸದ್ಯಕ್ಕೆ ಬಿಜೆಪಿಗರು ಒಪ್ಪಿಕೊಂಡಿದ್ದಾರೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರ ಹಕ್ಕು ಚಲಾವಣೆ :

ಶಿರಸಿ ಯಲ್ಲಿ 1,64,905 ಜನ ಮತದಾರರು ಹಕ್ಕು ಚಲಾಯಿಸಿದ್ದು, ಶೇ. 80.48 ,ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 1,49,337 ಜನ ಮತದಾರರು ಹಕ್ಕು ಚಲಾಯಿಸಿದ್ದು, ಶೇ. 79.96, ರಷ್ಟು ಮತದಾನವಾಗಿದೆ.

ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ 1,65, 599 ಜನ ಮತದಾರರು ಹಕ್ಕು ಚಲಾಯಿಸಿದ್ದು, ಶೇ.73.63, ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 1,40,971 ಮತದಾರರು ಮತದಾನ ಮಾಡಿದ್ದಾರೆ. ಶೇ 75.91 ರಷ್ಟು ಮತ ಚಲಾವಣೆ ಆಗಿದೆ.
ಕುಮಟಾ ಕ್ಷೇತ್ರದಲ್ಲಿ ಶೇ. 76.93 ಮತದಾನವಾಗಿದ್ದು, 1,47, 307 ಮತದಾರರು ಹಕ್ಕು ಚಲಾಯಿಸಿದ್ದಾರೆ‌ .ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ 1,73,071 ಜನ ಮತದಾರರು ಮತ ಹಾಕಿದ್ದಾರೆ. ಇಲ್ಲಿ ಶೇ.76 ರಷ್ಟು, ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ 1,62, 065 ಜನ ಮತದಾರರು ಮತ ಹಾಕಿದ್ದಾರೆ. ಶೇ. 73.85 ರಷ್ಟು, ‌ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 1,52,272 ಮತದಾರರು ಮತದಾನ ಮಾಡಿದ್ದಾರೆ. ಶೇ. 76.27 ರಷ್ಟು ಮತದಾನವಾಗಿದೆ.

ಈ ಸಲ 2024 ರಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ. ಕುಮಟಾದ ಎ.ವಿ. ಬಾಳಿಗಾ ಕಾಲೇಜಿನಲ್ಲಿ ಮತ ಯಂತ್ರಗಳನ್ನು ಸುಭದ್ರವಾಗಿ ಇಡಲಾಗಿದೆ. ಅಭ್ಯರ್ಥಿಗಳ‌ ಭವಿಷ್ಯ ಈಗ ಮತಯಂತ್ರಗಳಲ್ಲಿ ಅಡಗಿದೆ. ಕಾಂಗ್ರೆಸ್ -ಬಿಜೆಪಿ ಅಭ್ಯರ್ಥಿ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು.ಕಾಂಗ್ರೆಸ್ ತನ್ನ ಕ್ಷೇತ್ರವನ್ನು 26 ವರ್ಷಗಳ ನಂತರ ಮರಳಿ ಪಡೆಯಲು ಉತ್ಸುಕವಾಗಿದೆ.

ಅಭ್ಯರ್ಥಿಗಳಿಬ್ಬರ ತಂತ್ರಗಾರಿಕೆ :

ಕಾಂಗ್ರೆಸ್ ಅಭ್ಯರ್ಥಿ ಅಭಿವೃದ್ಧಿ ಬಗ್ಗೆ ಕೇಂದ್ರೀಕರಿಸಿ ಆಡಿದ ಮಾತು,‌ ಮಾಡಿದ ಪ್ರಚಾರ ಅವರ ನೆರವಿಗೆ ಬರಲಿವೆ ಎಂಬ ಮಾತು ಕ್ಷೇತ್ರದಲ್ಲಿ ಇದೆ.

ಇನ್ನು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಭವಿ ರಾಜಕಾರಣಿ‌ ‌. ಜಿಲ್ಲೆಯ ಎಲ್ಲಾ ಕಡೆ ಅವರ ಲಿಂಕ್ ಗಳಿದ್ದು, ಕಾರ್ಯಕರ್ತರ ಪ್ರಚಾರ ನಂಬಿದ್ದಾರೆ .ಜನರ ಮುಂದೆ ‌ಕಾರ್ಯಕ್ರಮ ಇಡದೆ ಪ್ರಧಾನಿ ಮೋದಿ ಹೆಸರಲ್ಲಿ ಮತ‌ ಕೇಳಿದ್ದರು. ಆರ್ ಎಸ್ ಎಸ್ ಸಿದ್ಧಾಂತಕ್ಕೆ ಬದ್ಧರಾದ ಕಾಗೇರಿಗೆ ಈ ಸಲ ಸಂಘ ಪರಿವಾರ ಅಷ್ಟಾಗಿ ಪ್ರಚಾರಕ್ಕೆ ನಿಂತಿರಲಿಲ್ಲ. ಅನಂತ ಕುಮಾರ್ ಹೆಗಡೆ ಬೆಂಬಲಿಗರು ತಟಸ್ಥರಾಗಿದ್ದುದು ಭಾರೀ ಹಿನ್ನೆಡೆ ತರಲಿದೆ ಎಂಬ ಚರ್ಚೆ ಶುರುವಾಗಿದೆ. ನಗರ ಪ್ರದೇಶದಲ್ಲಿ ಬಿಜೆಪಿ ಪ್ರಭಾವ ಇದ್ದರೂ,‌ಗ್ರಾಮೀಣ ಭಾಗ ಬಿಜೆಪಿಯ ಕೈ ಹಿಡಿದಿಲ್ಲ ಎಂಬ ಚರ್ಚೆ ಇದೆ. ಬಿಜೆಪಿಯ ಸಂಪ್ರದಾಯಿಕ ಮತಗಳನ್ನು‌ ನೆಚ್ಚಿ ಕೂತಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಅಂಜಲಿ ನಿಂಬಾಳ್ಕರ್ ರಾಜಕೀಯ ಭವಿಷ್ಯ ಬರೆಯುವ ಈ ಚುನಾವಣೆ ಫಲಿತಾಂಶಕ್ಕೆ
ಜೂ.4 ರವರೆಗೆ ಕಾಯಬೇಕಿದೆ.
…..

Latest Indian news

Popular Stories