ಡಿಕೆಶಿ ನಿವಾಸದಲ್ಲಿ ನಡೆದ ಸಭೆಗೆ ಜಮೀರ್ ಗೈರು

ಬೆಂಗಳೂರು: ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿರುವ ಶಾಸಕ ಜಮೀರ್ ಅಹ್ಮದ್ ಅವರು ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ನಿವಾಸದಲ್ಲಿ ನಡೆದ ಪಕ್ಷದ ನಾಯಕರ ಸಭೆಯಿಂದ ದೂರ ಉಳಿದಿದ್ದರು.
ಮೂಲಗಳ ಪ್ರಕಾರ ಈ ಸಭೆಗೆ ಜಮೀರ್ ಅಹ್ಮದ್ ಖಾನ್ ಅವರಿಗೆ ಆಹ್ವಾನ ನೀಡಿರಲಿಲ್ಲವಂತೆ. ಆಹ್ವಾನ ಇಲ್ಲದ ಸಭೆಯಲ್ಲಿ ಯಾಕೆ ಪಾಲ್ಗೊಳ್ಳಬೇಕು ಎಂಬ ಕಾರಣದಿಂದ ಜಮೀರ್ ದೂರ ಉಳಿದಿದ್ದರು ಎಂದು ಹೇಳಲಾಗಿದೆ.
ಶುಕ್ರವಾರ ನಡೆದ ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪಾಲ್ಗೊಂಡಿದ್ದರು. ಆದರೆ, ಬೆಂಗಳೂರಿನ ಪ್ರಭಾವಿ ಶಾಸಕರಲ್ಲಿ ಒಬ್ಬರಾಗಿರುವ ಜಮೀರ್ ಮಾತ್ರ ಗೈರು ಹಾಜರಾಗಿದ್ದರು.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿ 28 ವಿಧಾನಸಭಾ ಮತ್ತು ನಾಲ್ಕು ಲೋಕಸಭಾ ಕ್ಷೇತ್ರಗಳಿವೆ. ಹಾಗಾಗಿ, ಯಾವುದೇ ಪಕ್ಷಕ್ಕೆ ಇಲ್ಲಿ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಜೊತೆಗೆ, ಬಿಬಿಎಂಪಿ ಚುನಾವಣೆಗೆ ಸಂಬAಧ ಕೋರ್ಟ್ ಏನಾದರೂ ಆದೇಶ ಹೊರಡಿಸಿದರೆ ಅದಕ್ಕೆ ಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಡಿ.ಕೆ. ಶಿವಕುಮಾರ ಸಭೆ ಕರೆದಿದ್ದರು.
ಸಭೆಯಲ್ಲಿ ಸಿದ್ದರಾಮಯ್ಯ ಅವರಲ್ಲದೆ, ಕೃಷ್ಣ ಭೈರೇಗೌಡ, ಸೌಮ್ಯ ರೆಡ್ಡಿ, ರಾಮಲಿಂಗ ರೆಡ್ಡಿ, ಕೆ.ಜೆ.ಜಾರ್ಜ್, ರಿಜ್ವಾನ್ ಅರ್ಷದ್, ಬೈರತಿ ಸುರೇಶ್, ಈಶ್ವರ್ ಖಂಡ್ರೆ, ಅಖಂಡ ಶ್ರೀನಿವಾಸಮೂರ್ತಿ, ಡಿ.ಕೆ.ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಭಾಗವಹಿಸಿರಲಿಲ್ಲ.
ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಹೇಳಿದ್ದರಿಂದಲೇ ಜಮೀರ್ ಅಹ್ಮದ್ ಖಾನ್ ಅವರನ್ನು ಈ ಸಭೆಯಿಂದ ದೂರ ಇಡಲಾಗಿತ್ತು ಎಂಬ ಮಾತು ಕೇಳಿ ಬರುತ್ತಿದೆ.

Latest Indian news

Popular Stories

error: Content is protected !!