ಅನುಮತಿಯಿಲ್ಲದೆ ದೃಶ್ಯ ಬಳಕೆ: “ಹಾಸ್ಟೆಲ್‌ ಹುಡುಗರಿ”ಗೆ ಲೀಗಲ್‌ ನೋಟಿಸ್ ಕೊಟ್ಟ ರಮ್ಯಾ

ಬೆಂಗಳೂರು: ಸ್ಯಾಂಡಲ್‌ ವುಡ್‌ ನಲ್ಲಿ ಬಿರುಸಿನ ಪ್ರಚಾರದಿಂದ ಸದ್ದು ಮಾಡಿರುವ ʼ’ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ” ಸಿನಿಮಾ ಇದೇ ವಾರ ತೆರೆಗೆ ಬರಲಿದೆ. ಇನ್ನೇನು ತೆರೆಗೆ ಬರಬೇಕು ಎನ್ನುವಾಗಲೇ ಸಿನಿಮಾಕ್ಕೆ ಕಾನೂನು ತೊಡಕು ಅಡ್ಡಿಯಾಗಿದೆ.

ಸ್ಯಾಂಡಲ್‌ ವುಡ್‌ ಕ್ವೀನ್‌, ನಟಿ ರಮ್ಯಾ ಅವರು ʼಹಾಸ್ಟೆಲ್‌ ಹುಡುಗರಿʼಗೆ ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ʼʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ” ಸಿನಿಮಾ ಸಟ್ಟೇರಿದ ದಿನದಿಂದ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿದೆ. ಸಿನಿಮಾವನ್ನು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್‌ ಪ್ರಸ್ತುತಪಡಿಸುತ್ತಿದೆ.

ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಪ್ರಮೋಟ್‌ ಮಾಡಿ, ಟೀಸರ್‌, ಟ್ರೇಲರ್‌ ನಿಂದ ಗಮನ ಸೆಳೆದ ಸಿನಿಮಾ ತಂಡಕ್ಕೆ ಈಗ ಕಾನೂನು ತೊಡಕು ಉಂಟಾಗಿದೆ.

ನಟಿ ರಮ್ಯಾ ಬಹು ಸಮಯದ ಬಳಿಕ ಶೂಟ್‌ ನಲ್ಲಿ ಭಾಗಿಯಾಗಿದ್ದರು. ಅದು ʼʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ” ಸಿನಿಮಾದ ಪ್ರೋಮೋ ಶೂಟ್‌  ಮೂಲಕ. ಇತ್ತೀಚೆಗೆ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಈ ಟ್ರೇಲರ್‌ ನಲ್ಲಿ ನಟ ದಿಗಂತ್‌, ರಿಷಬ್‌,ಶೈನ್‌ ಶೆಟ್ಟಿ, ಪವನ್‌ ಕುಮಾರ್‌ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ನಟಿ ರಮ್ಯಾ ಅವರನ್ನು ತೋರಿಸಲಾಗಿದೆ. ಇದೇ ಈಗ “ಹಾಸ್ಟೆಲ್‌ ಹುಡುಗರಿ”ಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಪ್ರೋಮೋ ಶೂಟ್‌ ನಲ್ಲಿ ಮಾತ್ರ ನನ್ನ ದೃಶ್ಯ ಬಳಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಟ್ರೇಲರ್‌ ನಲ್ಲಿ ನನ್ನ ದೃಶ್ಯವನ್ನು ಅನುಮತಿಯಿಲ್ಲದೆ ಬಳಸಲಾಗಿದೆ. ಸಿನಿಮಾದಲ್ಲಿ ನನ್ನ ದೃಶ್ಯವನ್ನು ಬಳಸಬಾರದು. ಯೂಟ್ಯೂಬ್‌ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಈಗಾಗಲೇ ಪ್ರಸಾರವಾಗಿರುವ ವಿಡಿಯೋವನ್ನು ತೆಗೆದುಹಾಕಬೇಕು. ನನಗೆ ಇದರಿಂದ ನಷ್ಟವಾಗಿದೆ ಇದರಿಂದ 1 ಕೋಟಿ ರೂ. ಪರಿಹಾರವನ್ನು ನೀಡುವಂತೆ ನೋಟಿಸ್‌ ನಲ್ಲಿ ಒತ್ತಾಯಿಸಿದ್ದು, ತನ್ನ ದೃಶ್ಯವನ್ನು ಸಿನಿಮಾದಲ್ಲಿ ಬಳಸಬಾರದೆಂದು ರಮ್ಯಾ ಕೋರ್ಟಿನಿಂದ ತಡೆಯಾಜ್ಞೆ ತಂದಿರುವುದಾಗಿ ಹೇಳಲಾಗಿದೆ.

ಚಿತ್ರತಂಡದೊಂದಿಗೆ ರಮ್ಯಾ ಒಳ್ಳೆಯ ರೀತಿಯಲ್ಲಿದ್ದರು. ಚಿತ್ರದಲ್ಲೂ ನಟಿಸಿರುವ ಅವರು ಏಕಾಏಕಿ ಲೀಗಲ್ ನೋಟಿಸ್‌ ಜಾರಿ ಮಾಡಿರುವುದು “ಹಾಸ್ಟೆಲ್‌ ಹುಡುಗರಿಗೆ” ಹಿನ್ನೆಡೆಯಾಗುವ ಸಾಧ್ಯತೆಯಿದೆ.

ನಿತಿನ್‌ ಕೃಷ್ಣಮೂರ್ತಿ ನಿರ್ದೇಶನ ಮಾಡಿರುವ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ” ಸಿನಿಮಾವನ್ನು ಪ್ರಜ್ವಲ್‌ ಬಿಪಿ, ವರುಣ್‌ ಕುಮಾರ್‌ ಗೌಡ, ಅರವಿಂದ್‌ ಕಶ್ಯಪ್‌ ಹಾಗೂ ಇತರು ಸೇರಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಇದೇ ವಾರ ಸಿನಿಮಾ ತೆರೆಗೆ ಬರಲಿದೆ.

Latest Indian news

Popular Stories