ಏಪ್ರಿಲ್ 2ನೇ ವಾರದಲ್ಲಿ ಶ್ರೀಮಂತ ಚಿತ್ರ ಬಿಡುಗಡೆ

ವಿಜಯಪುರ : ರೈತರ ದೈನಂದಿನ ಬದುಕು, ಬವಣೆ, ಕರ್ನಾಟಕದ ಜಾನಪದ ಕಲೆ ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ಅನಾವರಣ ಮಾಡುವ ಶ್ರೀಮಂತ ಎನ್ನುವ ಚಲನಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಏಪ್ರಿಲ್ ಎರಡನೇ ವಾರದಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರ ನಿರ್ದೇಶಕ ಹಾಸನ್ ರಮೇಶ ತಿಳಿಸಿದ್ದಾರೆ.

ಈ ಕುರಿತು ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರೆಯಾಗುತ್ತಿರುವ ಹಳ್ಳಿ ಸುಗ್ಗಿ, ಜಾತ್ರೆ, ಹಬ್ಬ, ಹಾಡು, ಹಸೆ, ಹಳ್ಳಿ ಆಟಗಳ ಸಂಭ್ರಮಗಳನ್ನು ಈ ಚಲನಚಿತ್ರ ನೆನಪಿಸಲಿದೆ, ಎಲ್ಲ ವಿಷಯಗಳನ್ನು ತಿಳಿಹಾಸ್ಯದ ಮೂಲಕ ಪ್ರೇಕ್ಷಕರಿಗೆ ಮನರಂಜಿಸುವುದು ನಮ್ಮ ಚಿತ್ರ ತಂಡದ ಆಶಯವಾಗಿದೆ ಎಂದು ತಿಳಿಸಿದರು.

ಒಬ್ಬ ರೈತ ತನ್ನ ಜೀವನದಲ್ಲಿ ಉಂಟಾಗುವ ಏರಿಳಿತಗಳು, ತಳಮಳಗಳು, ಕಷ್ಟ ಸುಖವನ್ನು ಹೇಗೆ ಅನುಭವಿಸುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಿಕೊಡಲಾಗಿದೆ. ತಾನು ಇಡೀ ದೇಶಕ್ಕೆ ಅನ್ನ ಹಾಕುವ ದೊರೆ, ತಾನೆಂದು ಬಡವನಲ್ಲ ಎನ್ನುವುದು ಈ ಚಿತ್ರದ ತಿರುಳು ಎಂದು ಹೇಳಿದರು.

ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ಅಭಿನಯಿಸಿದ್ದು, ಇವರಿಗೆ ನಾಯಕಿಯಾಗಿ ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್ ಜೊತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು. ಅಲ್ಲದೆ ಈ ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗಿದ್ದು ಹಿರಿಯ ನಟರಾದ ರಮೇಶ್ ಭಟ್, ರವಿಶಂಕರ್ ಸಾಧುಕೋಕಿಲ ಜಿತೆಗೆ ವಿಜಯಪುರದ ಹಾಸ್ಯ ಕಲಾವಿದ ರಾಜು ತಾಳಿಕೋಟೆ ಅಭಿನಯಿಸಿದ್ದಾರೆ ಎಂದರು.

ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರು ಸಂಗೀತ ಹಾಗೂ ಸಾಹಿತ್ಯ ನೀಡಿದ್ದು, ಹಾಸನ್ ರಮೇಶ ಅವರು ನಿರ್ದೇಶನ ಮಾಡಿದ್ದಾರೆ.

Latest Indian news

Popular Stories