BSWT ವತಿಯಿಂದ 8 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಅರವಿಂದ ಬೋಳಾರ್ ರವರಿಗೆ ವರ್ಷದ ವ್ಯಕ್ತಿ ಪ್ರಧಾನ.

ಮಂಗಳೂರು : ಭಾರತ್ ಸೋಶಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ (ರಿ) “BSWT” ವತಿಯಿಂದ ಪ್ರಸಕ್ತ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಅರವಿಂದ ಬೋಳಾರ್ ರವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭವೂ ನಗರದ ಸಹೋದಯ ಸಭಾಂಗಣ ಬಲ್ಮಟ ಇಲ್ಲಿ ನೆರವೇರಿತು. ಪ್ರಾರಂಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಎನ್ ಅಮೀನ್ ಪ್ರಾಸ್ತಾವಿಕವಾಗಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿರಬೇಕಾದ ಪ್ರಮುಖ ಮೌಲ್ಯಗಳನ್ನು ವಿವರಿಸುತ್ತಾ “ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಈ ಮೂರು ಕೇಂದ್ರೀಯ ವಿಷಯಗಳಲ್ಲಿ ಕಳೆದ ಎಂಟು ವರ್ಷಗಳಿಂದ ಕರ್ನಾಟಕದಾದ್ಯಂತ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಾ ಪ್ರತೀ ವರ್ಷ ನೂರೈವತ್ತು ಅರ್ಹ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ” ಎಂದು ಟ್ರಸ್ಟ್ ನ ಸಂಕ್ಷಿಪ್ತ ಪರಿಚಯವನ್ನು ನೀಡಿದರು. ನಾರಾಯಣ ಗುರು ಪಿ.ಯು ಕಾಲೇಜಿನ ಪ್ರಾಂಶುಪಾಲೆಯಾದ ಶ್ರೀಮತಿ ರೇಣುಕಾ ಅರುಣ್ ಕಾರ್ಯಕ್ರಮವನ್ನು ಉದ್ಘಾಟಿಸಿ ” ಶಿಕ್ಷಣ ಒಬ್ಬ ವ್ಯಕ್ತಿಗೆ ಅತೀ ಮುಖ್ಯವಾದ ಬೇಡಿಕೆಯಾಗಿದೆ. ಉತ್ತಮ ಬದುಕು ಮತ್ತು ಗೌರವವನ್ನುಗಳಿಸಲು ಇದು ಸಹಕಾರಿಯಾಗುತ್ತದೆ. ಎಲ್ಲಾ ರೀತಿಯ ಶಿಕ್ಷಣ ಮನುಷ್ಯನಲ್ಲಿ ಇರಬೇಕು. ನಾರಾಯಣ ಗುರು ಕಲಿಸಿದ ತೃಭಾಷ ಸೂತ್ರ ಮೌಲ್ಯಾಧಾರಿತ ಶಿಕ್ಷಣಕ್ಕೆ ಪೂರಕವಾಗಿದೆ. ಮಾತೃಭಾಷೆ ಯಲ್ಲಿ ಅರಿವು ಧಾರ್ಮಿಕ ಜ್ಞಾನಕ್ಕಾಗಿ ಸಂಸ್ಕೃತ ಪಾಠ ಉದ್ಯೋಗ ದೃಷ್ಟಿಯಿಂದ ಇಂಗ್ಲಿಷ್ ಕಲಿಕೆ ಒಳ್ಳೆಯದೆಂದರು ಅಕ್ಷರ ಜ್ಞಾನ ಮಾತ್ರ ಶಿಕ್ಷಣವಲ್ಲ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದು ಕೂಡಾ ಶಿಕ್ಷಣದ ಭಾಗ ಎಂದು ಹೇಳಿದರು”. ನಂತರ ವೇದಿಕೆಯಲ್ಲಿ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನ್ಯ ಶ್ರೀ ಅರವಿಂದ ಬೋಳಾರ್ ರವರಿಗೆ ಶಾಲು ಹೊದಿಸಿ, ಪೇಠ ಧರಿಸಿ “ವರ್ಷದ ವ್ಯಕ್ತಿ” ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪತ್ರ, ಫಲಕ ಹಣ್ಣು ಹಂಪಲು ಮತ್ತು ಹತ್ತು ಸಾವಿರ ನಗದು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು “ಇಂದು ಹೆಚ್ಚಾಗಿ ಸಂಘ ಸಂಸ್ಥೆಗಳು ನೀಡುವ ಸ್ಕಾಲರ್ಶಿಪ್ ತಮ್ಮ ಬಳಗದವರಿಗೆ, ಜಾತಿಯವರಿಗೆ ಮೀಸಲಾಗಿರುತ್ತದೆ. ಆದರೆ ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಜಾತಿ ಧರ್ಮ ನೋಡದೆ ಅರ್ಹರಾದ ಬಡ ವಿದ್ಯಾರ್ಥಿಗಳನ್ನು ಪರಿಗಣಿಸಿ ನೀಡುತ್ತದೆ ಅದಕ್ಕೆ ಇಲ್ಲಿ ನೆರೆದಿರುವವರೇ ಸಾಕ್ಷಿ ಎಲ್ಲಾ ಧರ್ಮವರೂ ಇಲ್ಲಿ ಒಂದು ಸೇರಿದ್ದಾರೆ. ಹೀಗೆ ಬದುಕಿದರೆ ಮಾತ್ರ ಜೀವನ ಸಾರ್ಥಕ. ನಾವೆಲ್ಲರೂ ಒಂದು ಎಂಬ ಪಾಠವನ್ನು ಇಂದಿನ ವಿದ್ಯಾರ್ಥಿಗಳು ಕಲಿಯಬೇಕು. ಹಿರಿಯರನ್ನು ಗೌರವಿಸುವ ಕಿರಿಯರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಂದಾಗಿ ಬದುಕಬೇಕು ದೇಶಕ್ಕಾಗಿ ಏನನ್ನಾದರೂ ಸಾಧಿಸುವ ಮುಖಾಂತರ ಕೊಡುಗೆಯನ್ನು ನೀಡುವ ಗುರಿ ಸಾಧಿಸಬೇಕು. ಈ ಸಂಸ್ಥೆಯಂತೆ ಕಲಿತು ಉದ್ಯೋಗ ಗಳಿಸಿದ ನಂತರ ಇತರರಿಗೆ ಸಹಾಯ ಮಾಡುವ ಮನೋಭಾವ ಹೊಂದಬೇಕು ಎಂದೆನ್ನುತ್ತಾ ಹಲವಾರು ವಿಚಾರಗಳನ್ನು ಹಂಚಿಕೊಂಡರು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಶುರುಮಾಡಿದ ಸಂಘಾಟಕರನ್ನು ಅಭಿನಂದಿಸಿದರು. ಎಲ್ಲಾ ಕಡೆ ಹೆಚ್ಚಾಗಿ ನಿಗದಿತ ಸಮಯ ಮೀರಿ ಕಾರ್ಯಕ್ರಮ ಆರಂಭವಾಗುತ್ತದೆ ಇಲ್ಲಿ ಹೊಸ ಅನುಭವ ಎಂದು ಸ್ಮರಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಿಲಾಗ್ರೀಸ್ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಮೆಲ್ವಿನ್ ವಾಸ್, ನೀತಿ ಕಥೆಗಳ ಮುಖಾಂತರ ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜೀವನದ ಗುರಿಯ ಬಗ್ಗೆ ವಿವರಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಂಗಳ ಗಂಗೋತ್ರಿ ಕೊಣಾಜೆ ಇಲ್ಲಿನ ಸುಪರಿಡೆಂಟ್ ಶ್ರೀ ಹರೀಶ್ ಕುಮಾರ್ ಕುತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ‘BSWT ಇದರ ಸಾಮಾಜಿಕ ಸೇವಾ ಮನೋಭಾವವನ್ನು ಸ್ಮರಿಸಿದರು. ಯಾವುದೇ ಪ್ರಚಾರವನ್ನು ಬಯಸದೆ ಯಾರಿಂದ ಡೊನೇಶನ್ ಪಡೆಯದೆ ತಮ್ಮ ವಾರ್ಷಿಕ ಆದಾಯದ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಇವರ ಸೇವೆಯನ್ನು ಎಲ್ಲರೂ ಮಾದರಿಯಾಗಿಸಬೇಕು ಎಂದರು. ಇದರ ಉಪಾಧ್ಯಕ್ಷರಾದ ಅಶ್ರಫ್ ಎಂ. ಸಿ, ಪ್ರಧಾನ ಕಾರ್ಯದರ್ಶಿಯಾದ ಆಕಿಫ್ ಎಂಜಿನಿಯರ್, ಸದಸ್ಯರಾದ ಅಬ್ದುಲ್ಲಾ ಮತ್ತು ನಿಯಾಝ್ ಪೆರ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಗಣ್ಯ ಅತಿಥಿಗಳಿಗೆ ಗೌರವ ಕಾಣಿಕೆ ನೀಡಲಾಯಿತು. ಮಂಗಳೂರ ರಿಯಾಝ್ ಹಾಡಿದರು, ಕಾರ್ಯಕ್ರಮದ ಸಂಚಾಲಕ ಸುಲೈಮಾನ್ ಪಕ್ಕಲಡ್ಕ ವಂದಿಸಿದರು ಅಶೀರುದ್ದೀನ್ ಆಲಿಯಾ ಸಾರ್ತಬೈಲ್ ಸಹಕರಿಸಿದರು ಡಾ. ಅರುಣ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನಿಗದಿ ಪಡಿಸಿದ ಕೌಂಟರ್ ಗಳಲ್ಲಿ ಸುಮಾರು 150 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

Latest Indian news

Popular Stories