ಅಲ್ಪಸಂಖ್ಯಾತರ ಕುರಿತು ಬಿಜೆಪಿ ದ್ವಿಮುಖ ನೀತಿ – ಕುಮಾರ ಸ್ವಾಮಿ

ವಿಜಯಪುರ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಸಿಂಧಗಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ವಿಜಯಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಯಡಿಯೂರಪ್ಪನವರು ಅಲ್ಪಸಂಖ್ಯಾತರನ್ನು ಮತಕ್ಕಾಗಿ ಓಲೈಸುವ ಕೆಲಸ ಮಾಡುತ್ತಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

ಒಂದೆಡೆ ಮುಸ್ಲಿಮರನ್ನು ದೇಶದಿಂದಲೇ ಓಡಿಸಬೇಕು ಎನ್ನುವ ಬಿಜೆಪಿ, ಇನ್ನೊಂದೆಡೆ ಅವರಿಗೆ ನಾವೂ ಸಹಾಯ ಮಾಡಿದ್ದೇವೆ. ನಮಗೆ ವೋಟು ಕೊಡಬೇಕು ಎಂದು ಕೇಳುತ್ತಿದೆ. ದ್ವಿಮುಖ ನೀತಿ ಎಂದರೆ ಇದೇ ಎಂದು ಎಚ್ಡಿಕೆ ಕಿಡಿಕಾರಿದರು.

ಮುಸ್ಲಿಮರು ನಮ್ಮ ಪರ ಇರಬೇಕು ಎನ್ನುವ ಬಿಜೆಪಿ, ಅವರನ್ನು ಸಮಾನವಾಗಿ ನೋಡಬೇಕಲ್ಲವೇ? ಹಾಗೆ ಮಾಡದೇ ಮತ ಮಾತ್ರ ಹಾಕಬೇಕು ಎಂದು ಕೇಳಿದರೆ ಹೇಗೆ ಎಂದು ಎಚ್‌ಡಿಕೆ ಖಾರವಾಗಿ ಪ್ರಶ್ನಿಸಿದರು.

ಬಿಜೆಪಿಯು ಉಪ ಚುನಾವಣೆಯಲ್ಲಿ ಹಿಂದುತ್ವದ ಆಧಾರದ ಮೇಲೆ ಮತಯಾಚನೆ ಮಾಡುತ್ತಿದೆಯಲ್ಲ ಎನ್ನುವ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಬಿಜೆಪಿಯವರು ಮಾತ್ರ ಹಿಂದುಗಳಾ ಎಂದು ಸವಾಲೆಸೆದರು. ನಾವೇನು ಹೊರಗಿನಿಂದ ಬಂದಿದ್ದೇವಾ? ನಮಗೂ ಹಿಂದುತ್ವವಿದೆ, ನಂಬಿಕೆ – ಶ್ರದ್ಧೆಗಳಿವೆ. ಆದರೆ ನಾವು ಎಲ್ಲರನ್ನೂ ಒಳಗೊಂಡು ರಾಜಕೀಯ ಮಾಡಿದರೆ, ಬಿಜೆಪಿಯವರು ಕೇವಲ ಹಿಂದುತ್ವದ ಆಧಾರದ ಮೇಲೆ ಮಾತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಎಚ್ಡಿಕೆ ಕಿಡಿಕಾರಿದರು.

ಹೊರಗೆ ನಾವೆಲ್ಲ ಒಂದು, ನಾವೆಲ್ಲ ಹಿಂದು ಎಂದು ಹೇಳುತ್ತಲೇ ಒಳಗೆ ಮಾತ್ರ ಗರ್ಭ ಗುಡಿ ಸಂಸ್ಕೃತಿಯನ್ನು ಜೀವಂತ ಇಟ್ಟುಕೊಂಡಿದೆ ಬಿಜೆಪಿ. ಕೆಲವನ್ನು ಬಿಟ್ಟರೆ ದೀನ ದಲಿತರು, ಶೋಷಿತರಿಗೆ ಅಲ್ಲಿಗೆ ಪ್ರವೇಶಾ ಇದೆಯಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

Latest Indian news

Popular Stories