ಕೇರಳದಲ್ಲಿ ನ್ಯೂರೋ ವೈರಾಣು ಸೋಂಕು: ಕರಾವಳಿಯ ಜಿಲ್ಲೆಯಲ್ಲಿ ಎಚ್ಚರಿಕೆ ಅಗತ್ಯ

ಉಡುಪಿ/ಮಂಗಳೂರು: ಕೊರೊನಾ ಹಾವಳಿ ಇಳಿಮುಖವಾಗುತ್ತ ಜನರಲ್ಲಿ ನೆಮ್ಮದಿ ಮೂಡಿಸುತ್ತಿದೆ ಎನ್ನುವಷ್ಟರಲ್ಲಿ ಕೇರಳದಲ್ಲಿ ಹೊಸ ನ್ಯೂರೊ ವೈರಸ್‌ ಸೋಂಕು ಕಾಣಿಸಿಕೊಂಡಿದ್ದು, ನಿಧಾನಕ್ಕೆ ಹಬ್ಬುತ್ತಿದೆ.

ಕೇರಳದೊಂದಿಗೆ ನಿಕಟ ಸಂಪರ್ಕದಲ್ಲಿರುವ ಕರ್ನಾಟಕದ ಕರಾವಳಿಯಲ್ಲಿ ಸದ್ಯ ಈ ವೈರಾಣು ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಆದರೂ ನೆರೆಯ ಜಿಲ್ಲೆಗಳಾಗಿರುವುದರಿಂದ ಮಂಗಳೂರು ಮತ್ತು ಉಡುಪಿಯಲ್ಲಿ ಮುಂಜಾಗ್ರತೆ ಅಗತ್ಯ.

ವಾಂತಿ – ಭೇದಿ, ಹೊಟ್ಟೆನೋವು ಮತ್ತು ಸಣ್ಣದಾಗಿ ಜ್ವರ ಈ ಸೋಂಕಿನ ಪ್ರಮುಖ ಲಕ್ಷಣಗಳು. ಇದು ನೀರು, ಆಹಾರದ ಮೂಲಕ ಹರಡುತ್ತದೆ. ಸೋಂಕುಪೀಡಿತ ವ್ಯಕ್ತಿ ಬಳಸಿದ ನೀರು, ಆಹಾರವನ್ನು ಆರೋಗ್ಯವಂತರು ಹಂಚಿಕೊಂಡರೆ ತಗಲುವ ಸಾಧ್ಯತೆಯಿರುತ್ತದೆ. ಅಲ್ಲದೆ ಸೋಂಕು ಪೀಡಿತರ ಮಲ, ವಾಂತಿ ಅಂಶಗಳಿಂದಲೂ ಹರಡುವ ಸಾಧ್ಯತೆಗಳಿರುತ್ತವೆ.

ಕೇರಳದ ವಯನಾಡಿನಲ್ಲಿ ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ 13 ಮಂದಿಗೆ ಈ ನ್ಯೂರೊ ವೈರಸ್‌ ಸೋಂಕು ಕಾಣಿಸಿಕೊಂಡಿತ್ತು. ಆದ್ದರಿಂದ ಉಡುಪಿ, ದಕ್ಷಿಣ ಕನ್ನಡದಲ್ಲಿ ನಿಗಾ ಇರಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಸಾಮೂಹಿಕ ವೆಂಬಂತೆ ಹೊಟ್ಟೆನೋವು, ವಾಂತಿ, ಭೇದಿ ಕಾಣಿಸಿ ಕೊಂಡಲ್ಲಿ ತತ್‌ಕ್ಷಣ ಕ್ರಮ ಕೈಗೊಳ್ಳಲು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಅಕಾಲಿಕ ಮಳೆ, ಕೆಲವೊಮ್ಮೆ ವಿಪರೀತ ಸೆಕೆ, ಮತ್ತೂಮ್ಮೆ ಚಳಿ ಹೀಗೆ ಆಗಾಗ ಹವಾಮಾನ ವ್ಯತ್ಯಯ ಉಂಟಾಗುತ್ತಿರುವುದರಿಂದ ಎಲ್ಲರೂ ಮುಂಜಾಗ್ರತೆ ವಹಿಸುವುದು ಅತೀ ಅಗತ್ಯ. ಇದು ಜಾತ್ರೆ, ಶುಭ ಸಮಾರಂಭಗಳು ನಡೆಯುವ ಸಮಯವಾಗಿರುವುದರಿಂದ ಎಲ್ಲರೂ ಕಾಳಜಿ ವಹಿಸುವುದು ಅಗತ್ಯ.

ಮುನ್ನೆಚ್ಚರಿಕೆ ಹೇಗೆ?
-ವಾಂತಿ, ಭೇದಿ, ಹೊಟ್ಟೆನೋವು ಕಂಡು ಬಂದರೆ ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ, ಅಗತ್ಯ ಚಿಕಿತ್ಸೆ ಪಡೆಯುವುದು ಉತ್ತಮ.
-ಊಟ, ತಿಂಡಿ-ತಿನಿಸುಗಳ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸಬೇಕು. ನೀರಿನ ಮೂಲಗಳನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು. ಕುದಿಸಿ ಆರಿ ಸಿದ ಅಥವಾ ಬಿಸಿ ನೀರು ಕುಡಿಯಬೇಕು. ಹೊರಗಿನ ಆಹಾರ ಬೇಡ, ಮನೆಯ ಅಡುಗೆ ಯನ್ನೇ ಸೇವಿಸಿ.
-ವೈಯಕ್ತಿಕ ಸ್ವಚ್ಛತೆ ಅತೀ ಅಗತ್ಯ. ಆಗಾಗ ಸಾಬೂನು ಬಳಸಿ ಕೈ ತೊಳೆಯುತ್ತಿರಬೇಕು.
-ಶೌಚಾಲಯದ ಸ್ವಚ್ಛತೆ ಅಗತ್ಯ.
-ಗಾಳಿಯಿಂದ ಹರಡುವ ಸೋಂಕು ಅಲ್ಲ. ಹೀಗಾಗಿ ಭೀತಿ ಬೇಡ.
-ಸಾಮಾನ್ಯವಾಗಿ ಈ ಸೋಂಕು ಕಾಣಿಸಿಕೊಂಡ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ 2-3 ದಿನದಲ್ಲಿ ಗುಣಮುಖವಾಗುತ್ತಾರೆ. ಇದು ಮಾರಾಣಾಂತಿಕವಲ್ಲ.

Latest Indian news

Popular Stories