‘ಕೊರೋನಾ ನಿಗ್ರಹಕ್ಕೆ ಎಲ್ಲರೂ ಕೈಜೋಡಿಸಿ’: ಮಕ್ಕಳ ಕೊರೋನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮನವಿ ಮಾಡಿಕೊಂಡ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯಾದ್ಯಂತ 15ರಿಂದ 18 ವರ್ಷದ ಮಕ್ಕಳ ಕೊರೋನಾ ಲಸಿಕೆ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಇಂದು ಸೋಮವಾರ(ಜ.3) ಚಾಲನೆ ನೀಡಿದ್ದಾರೆ.

ಬೆಂಗಳೂರಿನ ಮೂಡಲಪಾಳ್ಯದ ಭೈರವೇಶ್ವರ ಶಾಲೆಯಲ್ಲಿ ಸಿಎಂ ಬೊಮ್ಮಾಯಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್, ವಸತಿ ಖಾತೆ ಸಚಿವ ವಿ ಸೋಮಣ್ಣ, ಬಿಬಿಎಂಪಿ ಕಮಿಷನಲ್ ಗೌರವ್ ಗುಪ್ತಾ ಮೊದಲಾದವರು ಉಪಸ್ಥಿತರಿದ್ದರು.

ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲರಿಗೂ ಸುರಕ್ಷಿತವಾದ ಆರೋಗ್ಯ ಸಿಗಬೇಕೆಂಬುದು ಅಭಿಯಾನದ ಉದ್ದೇಶವಾಗಿದೆ. ಕೊರೋನಾ ಎಂಬ ವೈರಸ್ ಬರುತ್ತದೆ ಎಂದು ನಾವ್ಯಾರು ನಿರೀಕ್ಷೆ ಮಾಡಿರಲಿಲ್ಲ. ಅನಿರೀಕ್ಷಿತವಾಗಿ ಬಂದಾಗ ಈ ಹಿಂದೆ ಕೋವಿಡ್ ಎರಡೂ ಅಲೆಯ ಸಂದರ್ಭದಲ್ಲಿ ಸಮರ್ಥವಾಗಿ ಎದುರಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು ಜನತೆಗೆ ಸಹಾಯ ಮಾಡಿದ್ದಾರೆ. ವಿಶೇಷವಾಗಿ ಲಸಿಕೆ ನೀಡಿಕೆಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಕರ್ನಾಟಕ ಸೇರಿದಂತೆ ಭಾರತವನ್ನು ಸುರಕ್ಷಿತ ಮಾಡುವಲ್ಲಿ, ಯುವಜನತೆಯನ್ನು ಕಾಪಾಡುವಲ್ಲಿ ಲಸಿಕೆ ಅಭಿಯಾನ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಅರ್ಹ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಕೇಳಿಕೊಂಡರು.

Latest Indian news

Popular Stories