ಪಟಾಕಿ ಅಂಗಡಿಯಲ್ಲಿ ಬೆಂಕಿ: ಆರು ಜನ ಮೃತ್ಯು

ವಿಲ್ಲುಪುರಂ: ದೀಪಾವಳಿ ಹೊತ್ತಿನಲ್ಲಿ ತಮಿಳು ನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಾಪುರಂ ಎಂಬಲ್ಲಿ ಕಳೆದ ರಾತ್ರಿ ಅನಾಹುತ ಸಂಭವಿಸಿದೆ. ಪಟಾಕಿಗಳನ್ನು ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೃತಪಟ್ಟವರ ಸಂಖ್ಯೆ 6ಕ್ಕೇರಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಅನಾಹುತ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ.

ಮೃತ ನಾಲ್ವರನ್ನು ಕಲೀದ್, ಶಾ ಅಲಮ್, ಶೇಕ್ ಬಶೀರ್ ಮತ್ತು ಅಯ್ಯಸಮಿ ಎಂದು ಗುರುತಿಸಲಾಗಿದ್ದು ಮತ್ತೊಬ್ಬರ ಗುರುತು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರರನ್ನು ಕಲ್ಲಕುರಿಚಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಕೂಡ ಪೊಲೀಸರು ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಲೈನ್ ನಲ್ಲಿ ಬೆಂಕಿ ಹತ್ತಿಕೊಂಡು ಈ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಕಟ್ಟಡದಲ್ಲಿ ಇನ್ನೂ ಕೆಲವರು ಸಿಲುಕಿ ಹಾಕಿಕೊಂಡಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಶಂಕರಾಪುರಂನಲ್ಲಿ ದಿನಸಿ ಅಂಗಡಿಯಲ್ಲಿ ದೀಪಾವಳಿ ಸಮಯವಾಗಿರುವುದರಿಂದ ಕೆಲ ದಿನಗಳ ಹಿಂದೆ ಪಟಾಕಿ ಅಂಗಡಿಯನ್ನು ತೆರೆಯಲಾಗಿತ್ತು. ಕಟ್ಟಡದ ಮೊದಲ ಮಹಡಿಯಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ನಿನ್ನೆ ರಾತ್ರಿ ಪಟಾಕಿಗಳು ತುಂಬಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಪಟಾಕಿಗಳು ಒಂದರ ನಂತರ ಒಂದರಂತೆ ಅವ್ಯಾಹತವಾಗಿ ಸ್ಫೋಟಗೊಳ್ಳಲು ಆರಂಭಿಸಿದವು.

ಕೂಡಲೇ ಬೃಹತ್ ಪ್ರಮಾಣದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಕೂಡಲೇ ಸ್ಥಳಕ್ಕೆ ಬಂದಿದ್ದರಿಂದ ಅಗ್ನಿ ಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಬೆಂಕಿಯನ್ನು ಆರಿಸಲು ಸುಮಾರು ಎರಡು ಗಂಟೆ ಹಿಡಿಯಿತು.

Latest Indian news

Popular Stories