ಪ್ರಿಯಾಂಕಾ ಗಾಂಧಿ ಯಾರು? ಅವರಿಗೆ ಯಾವ ಅಧಿಕಾರವಿದೆ?: ಪಂಜಾಬ್ ಸಿಎಂ ವಿರುದ್ಧ ಬಿಜೆಪಿ ಕಿಡಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಘಟನೆ ಕುರಿತಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ವಿವರಣೆ ನೀಡಿರುವುದಾಗಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿಯಂತಹ ಉನ್ನತ ಹುದ್ದೆಯ ಭದ್ರತೆಯಲ್ಲಿ ಉಂಟಾದ ವೈಫಲ್ಯದ ಬಗ್ಗೆ ಪ್ರಿಯಾಂಕಾ ಗಾಂಧಿ ಅವರಿಗೆ ವರದಿ ನೀಡಲು ಅವರು ಯಾವ ಅಧಿಕಾರ ಹೊಂದಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ.

‘ಪ್ರಧಾನಿ ಮೋದಿ ಹತ್ತಿರವೂ ಯಾರೂ ಸುಳಿದಿರಲಿಲ್ಲ. ನಾನು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಾತನಾಡಿದ್ದೆ. ಇಲ್ಲಿ ಏನೇನು ನಡೆದಿತ್ತೋ ಅದರ ವಿವರವನ್ನು ಅವರಿಗೆ ನೀಡಿದ್ದೇನೆ. ಅಲ್ಲಿ ಯಾವ ಭದ್ರತಾ ಬೆದರಿಕೆ ಇತ್ತು ಪ್ರಧಾನಿ ಅವರೇ ಎಂದು ಪ್ರಶ್ನಿಸಿ ನಾನು ಸೋತು ಹೋಗಿದ್ದೇನೆ. ಪ್ರಧಾನಿ ನಿಂತಿದ್ದ ಒಂದು ಕಿಮೀ ವ್ಯಾಪ್ತಿಯಲ್ಲಿ ಯಾವ ಪ್ರತಿಭಟನಾಕಾರರೂ ಇರಲಿಲ್ಲ. ಅಲ್ಲಿ 6,000 ಭದ್ರತಾ ಸಿಬ್ಬಂದಿ, ಐಬಿ ಮತ್ತು ಪ್ರಧಾನಿ ಭದ್ರತೆಯ ಎಸ್‌ಪಿಜಿ ಇತ್ತು’ ಎಂದು ಮುಖ್ಯಮಂತ್ರಿ ಚನ್ನಿ ಹೇಳಿದ್ದರು.

ಒಬ್ಬ ಹಾಲಿ ಮುಖ್ಯಮಂತ್ರಿ ಪ್ರಧಾನಿ ಭದ್ರತೆಯ ಬಗ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ವಿವರಿಸುತ್ತಾರೆ! ಏಕೆ? ಪ್ರಿಯಾಂಕಾ ಅವರು ಯಾವ ಸಾಂವಿಧಾನಿಕ ಹುದ್ದೆ ಹೊಂದಿದ್ದಾರೆ? ಪ್ರಧಾನಿ ಭದ್ರತೆ ವಿಚಾರದಲ್ಲಿ ಪರಿಗಣಿಸಲು ಅವರು ಯಾರು? ಈ ಸಂಬಂಧ ಗಾಂಧಿ ಕುಟುಂಬ ಸ್ಪಷ್ಟನೆ ನೀಡಬೇಕು’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.

ಚನ್ನಿ ಸಾಬ್… ನೀವು ಸತ್ಯ ಹೇಳಿ… ಅವರಿಗೆ ‘ನಮ್ಮ ಕೆಲಸ ಮುಗಿದಿದೆ’ ಎಂದು ನೀವು ಹೇಳಿರಬೇಕು.. ನೀವು ಏನನ್ನು ಹೇಳಿದ್ದೀರೋ ಅದನ್ನು ಸಾಧಿಸಿದ್ದೇವೆ!’ ಎಂದು ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

ಸೋನಿಯಾ ಗಾಂಧಿ ಅವರ ಮುಖ್ಯಮಂತ್ರಿ, ಪ್ರಧಾನಿ ಮೋದಿ ಅವರಿಗೆ ಪ್ರತಿಕ್ರಿಯೆ ನೀಡಲಿಲ್ಲ… ಆದರೆ ಯಾರೋ ಪ್ರಿಯಾಂಕಾ ವಾದ್ರಾಗೆ ವರದಿ ನೀಡುತ್ತಾರೆ. ಪ್ರಿಯಾಂಕಾ ವಾದ್ರಾ ಯಾರು ಎಂದು ತಿಳಿಯಲು ಕುತೂಹಲ ಉಂಟಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಗಿ ಹೇಳಿದ್ದಾರೆ.

ಪಂಜಾಬ್‌ನ ಫಿರೋಜ್‌ಪುರಕ್ಕೆ ತೆರಳುವ ಮಾರ್ಗಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರು ಫ್ಲೈ ಓವರ್ ಮೇಲೆ ಸುಮಾರು 30 ನಿಮಿಷ ಸಿಲುಕಿಕೊಂಡಿತ್ತು. ಸ್ವಲ್ಪ ದೂರದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದರಿಂದ ಪ್ರಧಾನಿ ಮುಂದೆ ಸಾಗಲು ಸಾಧ್ಯವಾಗಿರಲಿಲ್ಲ. ಇದರಿಂದ ಅವರ ವಾಹನ ಬಟಿಂಡಾಕ್ಕೆ ಮರಳಿತ್ತು. ಈ ಘಟನೆ ದೇಶಾದ್ಯಂತ ತೀವ್ರ ಚರ್ಚೆಗೆ ಒಳಗಾಗಿದೆ. ಇದು ಪ್ರಧಾನಿ ಮೋದಿ ಅವರ ಹತ್ಯೆಗೆ ರೂಪಿಸಿರುವ ಸಂಚು ಎಂದು ಬಿಜೆಪಿ ಆರೋಪಿಸಿದೆ. ಆದರೆ ಅಲ್ಲಿ ಯಾವ ವೈಫಲ್ಯವೂ ಆಗಿಲ್ಲ. ಇದು ಬಿಜೆಪಿಯ ನಾಟಕ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ.

Latest Indian news

Popular Stories