ಮನುಷ್ಯರಿಗಾದ ನೋವಿಗೆ ಸ್ಪಂದಿಸದಿದ್ದರೆ ನಾವು ಪ್ರಾಣಿಗಳಲ್ಲದೆ ಬೇರೇನೂ ಅಲ್ಲ: ಬಾಂಗ್ಲಾದೇಶದ ಹಿಂಸಾಚಾರ ಖಂಡಿಸಿ ಮುಸ್ಲಿಮರಿಂದ ಪ್ರತಿಭಟನೆ

ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲಿನ ಇತ್ತೀಚಿನ ಹಿಂಸಾಚಾರವನ್ನು ಖಂಡಿಸಿ ಮುಸ್ಲಿಮರು ಪ್ರತಿಭಟನೆ ನಡೆಸಿದರು.

ಬುಧವಾರ ಮಸೀದಿ-ಎ-ಖಾದ್ರಿಯಾ ಆವರಣದ ಹೊರಗೆ ಶಾಂತಿಯುತ ಮೆರವಣಿಗೆ ನಡೆಸಲಾಯಿತು.ಇದರಲ್ಲಿ ಹಲವಾರು ಮುಸ್ಲಿಮರು ಭಾಗವಹಿಸಿ ನೆರೆಯ ದೇಶದಲ್ಲಿನ ಅಲ್ಪಸಂಖ್ಯಾತರ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದರು.

ಪ್ರತಿಭಟನಾಕಾರರೊಬ್ಬರು ವಾರ್ತಾ ಭಾರತಿಯೊಂದಿಗೆ ಮಾತನಾಡಿ ” ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ. ಆದ್ದರಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅಲ್ಪಸಂಖ್ಯಾತರು ತಮ್ಮದಲ್ಲದ ತಪ್ಪಿಗೆ ದಾಳಿಗೊಳಗಾದರು. ಅಲ್ಲಿ ಅವರು ತುಳಿತಕ್ಕೊಳಗಾಗಿದ್ದಾರೆ” ಎಂದು ಘಟನೆಯನ್ನು ಖಂಡಿಸಿದರು.

“ಘಟನೆಗಳು ಎಲ್ಲಿ ಬೇಕಾದರೂ ಸಂಭವಿಸಬಹುದು. ಮುಖ್ಯ ವಿಷಯವೆಂದರೆ ನಾವು ಮನುಷ್ಯರು. ಇನ್ನೊಬ್ಬ ವ್ಯಕ್ತಿಯ ನೋವಿಗೆ ಸ್ಪಂದಿಸದಿದ್ದರೆ ನಾವು ಪ್ರಾಣಿಗಳಲ್ಲದೆ ಬೇರೇನೂ ಅಲ್ಲ” ಎಂದು ಹೇಳಿದರು.

“ಪ್ರತಿ ಹನಿಯು ಸಾಗರವನ್ನು ಸೃಷ್ಟಿಸುತ್ತದೆ. ನಾವು ಅದನ್ನು ಇಂದು ಇಲ್ಲಿ ಪ್ರಾರಂಭಿಸಿದ್ದೇವೆ. ಇದು ಇತರ ನಗರಗಳು, ರಾಜ್ಯಗಳು, ದೇಶಗಳಲ್ಲಿ ಪ್ರಾರಂಭವಾಗಬಹುದು ಮತ್ತು ನಂತರ ಅದು ಒತ್ತಡವನ್ನು ಉಂಟುಮಾಡುತ್ತದೆ. ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಮುಂದೆಂದೂ ಈ ರೀತಿಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿಯೇ ನಾವು ಇಲ್ಲಿಗೆ ಬಂದಿದ್ದೇವೆ ನಾವು ತುಳಿತಕ್ಕೊಳಗಾದವರ ಜೊತೆ ನಿಲ್ಲುತ್ತೇವೆ. ಏಕೆಂದರೆ ನಾವು ಮೌನವಾಗಿದ್ದರೆ ನಾವು ದಬ್ಬಾಳಿಕೆಯ ಪರವಾಗಿ ನಿಂತ ಹಾಗೆ.ಈ ಕುರಿತು ಮೌನವಾಗಿರಲು ಖಂಡಿತ ಸಾಧ್ಯವಿಲ್ಲ ಎಂದು ಹೇಳಿದರು.

ಅಕ್ಟೋಬರ್ 17 ರಂದು ಕೊಮಿಲ್ಲಾ ಜಿಲ್ಲೆಯ ನಾನುವಾ ದಿಘಿರ್ ಪರ್‌ನಲ್ಲಿ ನಡೆದ ದುರ್ಗಾಪೂಜಾ ಪಂಂಡಲ್‌ನಲ್ಲಿ ಕುರಾನ್‌ನ ಪ್ರತಿಯನ್ನು ಇರಿಸಿದಾಗ ಬಾಂಗ್ಲಾದೇಶದಲ್ಲಿ ಕೋಮು ಉದ್ವಿಗ್ನತೆ ಉಂಟಾಯಿತು. ಅಂದಿನಿಂದ ದೇಶದ ಹಲವಾರು ಭಾಗಗಳಿಂದ ವಿಧ್ವಂಸಕ ಘಟನೆಗಳು ವರದಿಯಾಗಿವೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಕೂಡ ಕೋಮು ಹಿಂಸಾಚಾರವನ್ನು ಖಂಡಿಸಿದ್ದಾರೆ. ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಹೇಳಿದರು. ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸುಮಾರು 72 ಪ್ರಕರಣಗಳನ್ನು ದಾಖಲಿಸಲಾಗಿದೆ. 475 ಜನರನ್ನು ಬಂಧಿಸಲಾಗಿದೆ.

Latest Indian news

Popular Stories