ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ; ಪ್ರತಿಭಟನೆ, ಮೆರವಣಿಗೆಗೆ ಬ್ರೇಕ್

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಮೂರನೇ ಅಲೆ(Covid 3rd wave) ಮತ್ತು ಕೊರೋನಾ ರೂಪಾಂತರಿ ಸೋಂಕು ಓಮಿಕ್ರಾನ್ (Omicron) ಹೆಚ್ಚಾಗುತ್ತಿದೆ. ಮೂರನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ, ಕೊರೋನಾ ನಿರ್ಬಂಧಗಳನ್ನು ಎರಡು ವಾರಗಳಿಂದ ಜಾರಿಗೆ ತಂದಿದೆ.

ಆದರೆ ಇದು ಪರಿಣಾಮ ಬೀರಿದಂತೆ ಕಂಡುಬರುತ್ತಿಲ್ಲ, ಕಳೆದೊಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಜನವರಿ 4ರಂದು ಹೊರಡಿಸಿದ್ದ ಪ್ರಮಾಣಿತ ಕಾರ್ಯಚರಣೆ ವಿಧಾನ(Standard operating procedure-SoP)ವನ್ನು ಕಟ್ಟುನಿಟ್ಟಾಗಿ ಪಾಲನೆಗೆ ತರುವಂತೆ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಮೂರನೇ ಅಲೆ ಕಡಿಮೆಯಾಗುವವರೆಗೂ ಯಾವುದೇ ರ್ಯಾಲಿ, ಧರಣಿ, ಅಧಿಕ ಜನರನ್ನು ಸೇರಿಸಿ ಸಭೆ-ಸಮಾರಂಭಗಳು, ಇತರ ರಾಜಕೀಯ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕೆಂದು ಹೈಕೋರ್ಟ್ ಇಂದು ಸರ್ಕಾರಕ್ಕೆ ಆದೇಶ ನೀಡಿದೆ.

ಕೊರೋನಾ ಮೂರನೇ ಅಲೆ ಹೆಚ್ಚುತ್ತಿದ್ದರೂ ಸಾವಿರಾರು ಜನರನ್ನು ಸೇರಿಸಿ ಮೇಕೆದಾಟು ಪಾದಯಾತ್ರೆ(Mekedatu padayatra) ಹೇಗೆ ಮಾಡುತ್ತೀರಿ, ಪಾದಯಾತ್ರೆಗೆ ಸರ್ಕಾರ ಏಕೆ ತಡೆ ನೀಡುತ್ತಿಲ್ಲ ಎಂದು ಮೊನ್ನೆಯಷ್ಟೇ ಹೈಕೋರ್ಚ್ ಛೀಮಾರಿ ಹಾಕಿ ಸರ್ಕಾರ ಮತ್ತು ಕೆಪಿಸಿಸಿಗೆ ನೊಟೀಸ್ ಜಾರಿ ಮಾಡಿತ್ತು. ಇದರಿಂದ ನಿನ್ನೆ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆಯನ್ನು ಐದನೇ ದಿನಕ್ಕೆ ಮೊಟಕುಗೊಳಿಸಿದ್ದರು.

ಈ ನಡುವೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅನೇಕರಿಗೆ ಕೊರೊನಾ ಪಾಸಿಟಿವ್​ ಬಂದಿದೆ. ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ್ದು, ಕೆಪಿಸಿಸಿ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡಿಸಿದ್ದಾರೆ. ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆಯನ್ನು ಮುಂದೂಡಲಾಗಿದೆ ಎಂದು ಕೆಪಿಸಿಸಿ ಪರ ಹಿರಿಯ ವಕೀಲ ಉದಯ್ ಹೊಳ್ಳ ಮಾಹಿತಿ ನೀಡಿದ್ದಾರೆ. ಜತೆಗೆ ಬೇರೆ ಪಕ್ಷಗಳ ಕಾರ್ಯಕ್ರಮ ನಡೆಯುತ್ತಿವೆ. ಸರ್ಕಾರದ ತಾರತಮ್ಯ ಧೋರಣೆ ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ, ಧರಣಿಗೆ ಅವಕಾಶ ನೀಡಬಾರದು. ಅದಕ್ಕೆ ಹೈಕೋರ್ಟ್ ಇಂದು ಕೊವಿಡ್ ಅವಧಿಯ ಎಸ್ಒಪಿ ಉಲ್ಲಂಘನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದೆ.. ಸಮಾರಂಭ ತಡೆಗೆ ಸರ್ಕಾರದ ಕ್ರಮಗಳೇನು? ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಅನ್ವಯವಾಗಬೇಕಲ್ಲವೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಹೆಚ್ಚಳ ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆಯ ಔಚಿತ್ಯವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಸಿದ್ದರು. ಸರ್ಕಾರ ಅದನ್ನು ನಿಷೇಧಿಸಿರುವುದರಿಂದ ಮತ್ತು ಕೆಪಿಸಿಸಿ ಪಾದಯಾತ್ರೆಯನ್ನು ಮುಂದೂಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಕರಣವನ್ನು ಇತ್ಯರ್ಥಪಡಿಸಿದೆ.

ಇಂದು ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದ ಪಿಐಎಲ್ ನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಿದ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ರಿತು ರಾಜ್ ಅವಸ್ತಿ, ಎಲ್ಲಾ ರಾಜಕೀಯ ಪಕ್ಷಗಳಿಗೂ ಎಸ್​ಒಪಿ ಅನ್ವಯವಾಗುತ್ತದೆ.‌ ಯಾವ ರಾಜಕೀಯ ಪಕ್ಷಗಳೂ ನಿಯಮ‌ ಮೀರಬಾರದು ಎಂದು ಆದೇಶ ನೀಡಿದರು.

Latest Indian news

Popular Stories