ಹೊಸ ವರ್ಷಾಚರಣೆಗೆ ಕಠಿಣ ರೂಲ್ಸ್: ತಜ್ಞರ ಸಭೆಯ ನಂತರ ಮುಂದಿನ ನಿರ್ಧಾರ; ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ

ಹುಬ್ಬಳ್ಳಿ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಠಿಣ ನಿಯಮ ಜಾರಿಗೆ ತರುವ ಸಂಬಂಧ ಮುಂದಿನ ವಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿ ಎಪಿಎಂಸಿಯಲ್ಲಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವ ಸಂಬಂಧ ತಜ್ಞರ ಸಮಿತಿ ಜೊತೆ ಚರ್ಚಿಸಿದ ನಂತರ ಮುಂಗಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಜ್ಯ ಆತಂಕದಲ್ಲಿದೆ, ವಿದೇಶಿ ಪ್ರಯಾಣಿಕರಿಗಿಂತ, ನೆರೆಯ ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಓಮೈಕ್ರಾನ್ ಕೇಸ್ ಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಭಾನುವಾರ ಬೆಂಗಳೂರು ತಲುಪಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸುತ್ತೇನೆ. ಬಳಿಕ ಇನ್ನಷ್ಟು ಕಠಿಣ ನಿಲುವು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಹೇಳಿದ್ದಾರೆ.

ಓಮೈಕ್ರಾನ್ ಸೋಂಕು ಹರಡುವುದನ್ನು ತಡೆಗಟ್ಟಲು ಈಗಾಗಲೇ ಕೆಲವು ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ಇದರ ಜೊತೆಗೆ ತಜ್ಞರೊಂದಿಗೆ ಚರ್ಚಿಸಿ ಇನ್ನೂ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಹೊಸ ವರ್ಷಾಚರಣೆಗೆ ಅವಕಾಶ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ, ‘ಈಗಾಗಲೇ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿ ಬಿಡುಡಗಡೆ ಮಾಡಲಾಗಿದೆ. ಭಾನುವಾರ ತಜ್ಞರ ಸಭೆಯ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು’ ಎಂದಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದರು.

Latest Indian news

Popular Stories