ಬೀದರ್: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಂಥ ಮಹಾಪುರುಷರನ್ನೂ ಕಾಂಗ್ರೆಸ್ ನಿಂದಿಸಿತ್ತು. ಬಾಬಾ ಸಾಹೇಬ್ ಅವರನ್ನು ಕಾಂಗ್ರೆಸ್ ನಾಯಕರು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗಂಭೀರ ಆರೋಪ ಮಾಡಿದರು.
ಬೀದರ್ನ ಚಿನಕೇರಾ ಕ್ರಾಸ್ ಬಳಿ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಜತೆಗೆ, ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕೆಸರು ಎರಚಿದಷ್ಟು ಕರ್ನಾಟಕದಲ್ಲಿ ಕಮಲ ಅರಳಲಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಕನ್ನಡದಲ್ಲೇ ಮೋದಿ ಮಾತು
‘ಜಗದ್ಗುರು ಬಸವೇಶ್ವರ, ಶಿವ ಶರಣರ ನಾಡಿಗೆ ನನ್ನ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಈ ವಿಧಾನಸಭೆ ಚುನಾವಣೆಗೆ ನನ್ನ ಈ ಯಾತ್ರೆ ಬೀದರ್ನಿಂದ ಆರಂಭವಾಗುತ್ತಿರುವುದು ನನ್ನ ಭಾಗ್ಯ. ಬಸವೇಶ್ವರರ ಅನುಗ್ರಹ ನಮಗೆ ಶಕ್ತಿ ತುಂಬುತ್ತದೆ. ಕರ್ನಾಟಕದ ಕಿರೀಟ ಬೀದರ್ನ ಆಶೀರ್ವಾದ ನನಗೆ ಸಿಕ್ಕಿದೆ ಎಂದು ಹೇಳಿದರು.
‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’
ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಹೇಳಿದ ಮೋದಿ ಭಾಷಣದುದ್ದಕ್ಕೂ ಹಲವು ಬಾರಿ ಬಹುಮತದ ಸರ್ಕಾರದ ಅಗತ್ಯವನ್ನು ಒತ್ತಿಹೇಳಿದರು. ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಕರ್ನಾಟಕ ನಂಬರ್ 1 ರಾಜ್ಯ ಆಗಬಲ್ಲದು ಎಂದು ಹೇಳಿದರು.