ಗದಗ/ಬಾಗಲಕೋಟೆ: ರಾಜ್ಯದ ಕೆಲವೆಡೆ ಸುರಿಯುತ್ತಿರುವ ಅಕಾಲಿಕ ಮಳೆ ಅವಾಂತರ ಸೃಷ್ಟಿಸಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದು, ಜಾನುವಾರುಗಳು ಮೃತಪಟ್ಟಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶುಕ್ರವಾರ ಸಿಡಿಲು ಬಡಿದು ಇಬ್ಬರು ಕುರುಗಾಹಿಗಳಾದ ಗದಗದ ಲಿಂಗದಾಳ ಗ್ರಾಮದ ಶರಣಪ್ಪ ಪುರದ (21), ದೇವರಾಜ ಹನುಮಂತಪ್ಪ ಬಡಗಿ (18) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಜೊತೆಗಿದ್ದ ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಇನ್ನೊಂದೆಡೆ, ಬಾಗಲಕೋಟೆಯ ಬಾದಾಮಿ ತಾಲೂಕಿನ ಗ್ರಾಮವೊಂದರಲ್ಲಿ ಮನೆಯ ಛಾವಣಿ ಕುಸಿದು ಯಂಕುಬಾಯಿ (79), ಶಾರದಾ ಪತ್ತಾರ (58) ಎಂಬ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಇದಲ್ಲದೆ, ಕೊಪ್ಪಳ, ಕಲಬುರಗಿ ಮತ್ತು ಬೀದರ್‌ನಲ್ಲಿ ಜಾನುವಾರುಗಳು ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.