ಅಜೆಂಡಾ ಭಾಗವಾಗಿ ಪಠ್ಯಕ್ರಮ ಬದಲಾವಣೆ ಸಲ್ಲದು: ಅರುಣ ಶಹಾಪೂರ

ವಿಜಯಪುರ : ಚುನಾವಣಾ ಪ್ರಣಾಳಿಕೆ ಭಾಗವಾಗಿ ಪಠ್ಯಕ್ರಮವನ್ನು ಬದಲಾವಣೆ ಮಾಡುವುದಾಗಿ ಹೇಳಿರುವುದು ಅತ್ಯಂತ ಖಂಡನಾರ್ಹ, ಪಠ್ಯಕ್ರಮವನ್ನು ರಾಜಕೀಯಕ್ಕೆ ಎಳೆದು ತಂದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ, ಹಿಟ್ಲರ್ ಶಾಹಿ ಆಡಳಿತ ಮೂಲಕ ಪಠ್ಯಕ್ರಮವನ್ನು ಬದಲಿಸುವ ಕಾರ್ಯ ಮಾಡುತ್ತಿದೆ ಕೆಲವೊಂದು ಸಾಹಿತಿಗಳು ಶಿಕ್ಷಣ ಕ್ಷೇತ್ರವನ್ನು ಡಾಮಿನೇಟ್ ಮಾಡುತ್ತಿದ್ದಾರೆ, ಹೊಸ ಪರಂಪರೆಯನ್ನೇ ಸೃಷ್ಟಿಸುವ ಮೂಲಕ ರಾಜ್ಯ ಸರ್ಕಾರ ಅಪಾಯ ತಂದೊಡ್ಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿಯಲ್ಲಿ ಶಿಕ್ಷಣ ತಜ್ಞರನ್ನು ಕರೆದು ತಮಗೆ ಬೇಕಂತೆ ಪಠ್ಯಕ್ರಮ ರಚಿಸಿಕೊಳ್ಳುವುದಕ್ಕೆ ಇದು ಹಿಟ್ಲರ್ ಶಾಹಿ ಆಡಳಿತ ಅಲ್ಲ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಪಠ್ಯಕ್ರಮದ ಬಗ್ಗೆ ಚರ್ಚಿಸಿ, ಪಾಲಕರೊಂದಿಗೆ ಚರ್ಚಿಸಿ, ಆಗ ಪಠ್ಯಕ್ರಮ ಬದಲಿಸುವ ನಿಟ್ಟಿನಲ್ಲಿ ಯೋಚಿಸಿ ಹೊರತು ಅಜೆಂಡಾ ಭಾಗವಾಗಿ ಪಠ್ಯಕ್ರಮ ಬದಲಾವಣೆ ಸಲ್ಲದು ಎಂದು ಶಹಾಪೂರ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೆಲ್ಲವನ್ನೂ ಬದಿಗೊತ್ತಿ ಪಠ್ಯಕ್ರಮ ಬದಲಾವಣೆ ಮಾಡಿದರೆ ಅದು ಕಾಂಗ್ರೆಸ್ ಸರ್ಕಾರ ಸಮಸ್ತ ಕನ್ನಡ ನಾಡಿನ ನಿವಾಸಿಗಳಿಗೆ ಮಾಡಿದ ದೊಡ್ಡ ದ್ರೋಹ ಎಂದರು.
ಆ ವಿಷಯ ಸೇರ್ಪಡೆ, ಈ ವಿಷಯ ಸೇರ್ಪಡೆ ಎನ್ನುವುದು ಸಚಿವ ಸಂಪುಟದಲ್ಲಿ ನಿರ್ಣಯವಾಗಬೇಕೆ ಇದು ಎಂತಹ ಸಂಸ್ಕೃತಿ? ಚಕ್ರವರ್ತಿ ಸೂಲಿಬೆಲೆ ಅವರ ಪಾಠವನ್ನು ತೆಗೆಯಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ, ಆದರೆ ವಾಸ್ತವವಾಗಿ ಚಕ್ರವರ್ತಿ ಸೂಲಿಬೆಲೆ ಅವರು ರಚಿಸಿದ ಭಗತ್ ಸಿಂಗ್ ಅವರ ಬಗ್ಗೆ ರಚಿಸಿದ ಪಾಠವನ್ನು ಅವರು ತೆಗೆದಿದ್ದಾರೆ ಎಂದರು.


ಪಠ್ಯಪುಸ್ತಕ ಪರಿಷ್ಕರಣೆ ತರಾತುರಿ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ, ಪಠ್ಯಪುಸ್ತಕ ರಚನೆಗೆ ಸುದೀರ್ಘವಾದ ಇತಿಹಾಸವಿದೆ, ಕೊಠಾರಿ ಕಮೀಷನ್ ಇಡೀ ದೇಶಕ್ಕೆ ಪಠ್ಯಕ್ರಮ ಚೌಕಟ್ಟು ಇರಬೇಕು ಎಂದು ಆಗಲೇ ಪ್ರತಿಪಾದಿಸುವ ಜೊತೆಗೆ ಶಿಫಾರಸ್ಸು ಸಹ ಮಾಡಿತ್ತು, ಆದರೆ ಎಷ್ಟೋ ವರ್ಷಗಳು ಉರುಳಿದರೂ ಅದು ಜಾರಿಯಾಗಲಿಲ್ಲ, ಅದು ಜಾರಿಯಾಗಿದ್ದು 2005 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಎಂದರು.
ಕೆಲವೊಂದು ಸಾಹಿತಿಗಳು ಶಿಕ್ಷಣ ಕ್ಷೇತ್ರವನ್ನು ಡಾಮಿನೇಟ್ ಮಾಡುತ್ತಿದ್ದಾರೆ, ಉನ್ನತ ಶಿಕ್ಷಣದಲ್ಲಿ ಅನುಭವ ಹೊಂದಿರುವ ಪ್ರೊ.ಬರಗೂರ ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಠ್ಯಕ್ರಮ ರಚನೆ ಮಾಡಿ ಎನ್‌ಸಿಆರ್‌ಇಟಿ ವಿಮರ್ಶೆ ಮಾಡಿದಾಗ ಅದರ ಬಗ್ಗೆ ಎನ್‌ಸಿಇಆರ್‌ಟಿ 78 ಪುಟಗಳ ಆಕ್ಷೇಪಣೆ ಇದೆ ಎಂದರು.


ಈ ಹಿಂದೆ ಪ್ರೊ.ಜಿ.ಎಸ್. ಮುಂಡಬಡಿತ್ತಾಯ ಅವರ ನೇತೃತ್ವದಲ್ಲಿ ರಚನೆ ಮಾಡಲಾದ ಪಠ್ಯಕ್ರಮವನ್ನು ವಿಮರ್ಶೆ ಮಾಡಿದ ಎನ್‌ಸಿಇಆರ್‌ಟಿ ಆ ಪಠ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿತ್ತು ಈ ರೀತಿಯ ಇತಿಹಾಸ ಪಠ್ಯಕ್ರಮ ರಚನೆಗೆ ಇದೆ ಎಂದರು.

ಮುಖ್ಯಮಂತ್ರಿಗಳಿಗೆ ಪತ್ರ:
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಬೋಧಿಸಿದ ತತ್ವಜ್ಞಾನ ಸಾರ್ವಕಾಲಿಕ, ಪ್ಲೆಟೋ, ಅರಿಸ್ಟಾಟಲ್ ಮೊದಲಾದ ತತ್ವಜ್ಞಾನಿಗಳನ್ನು ಮೀರಿದ ಮಹಾನ್ ಚೇತನ. ಹೀಗಾಗಿ ತತ್ವಜ್ಞಾನಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅಧ್ಯಯನ ಕೇಂದ್ರ ಆರಂಭವಾಗಬೇಕು, ಈ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವೆ ಎಂದರು.

ಮಹಿಳಾ ವಿವಿಗೆ ವಿಶೇಷ ಪ್ಯಾಕೇಜ್ ನೀಡಿ:
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧೀಜಿ ಅವರು ಲೋಕಾರ್ಪಣೆ ‌ಮಾಡಿದ ವಿಶ್ವವಿದ್ಯಾಲಯ ಎಂಬ ಭಾವನೆ ಇದ್ದರೆ ಸಾಲದು, ಅದನ್ನು ಬೆಳೆಸುವ ಭಾವನೆ ಇರಬೇಕು, ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ವಿಶ್ವವಿದ್ಯಾಲಯಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದರು.
ವಿಶೇಷ ಪ್ಯಾಕೇಜ್ ಎಂದರೆ ಕಟ್ಟಡವಲ್ಲ, ಅಲ್ಲಿ ಬೋಧಕೇತರ ಸಿಬ್ಬಂದಿ ಇಲ್ಲ, ಹೀಗಾಗಿ ಕನಿಷ್ಠ 100 ಕೋಟಿ ರೂ. ವಿಶೇಷ ಅನುದಾನ ಒದಗಿಸಿ ಎಂದರು.
ಎಂ.ಬಿ. ಪಾಟೀಲರು ಪ್ರಭಾವಿ ನಾಯಕರು, ಹೆಚ್ಚು ಕಡಿಮೆ ಆದರೂ ಮುಖ್ಯಮಂತ್ರಿ ಆದರೂ ಅಚ್ಚರಿಪಡಬೇಕಿಲ್ಲ, ಹೀಗಾಗಿ ಅವರು ಮಹಿಳಾ ವಿಶ್ವವಿದ್ಯಾಲಯಕ್ಕೆ ಬಲ ತುಂಬಬೇಕು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸುರೇಶ ಬಿರಾದಾರ, ಮಾಧ್ಯಮ ಪ್ರಮುಖ ವಿಜಯ ಜೋಶಿ, ರಾಕೇಶ ಕುಲಕರ್ಣಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories