ಅಝೀಮ್ ಪ್ರೇಮ್’ಜಿ ಟ್ರಸ್ಟ್ ವಿರುದ್ಧ ಸುಳ್ಳು ಮೊಕದ್ದಮೆ ಆರೋಪ- ಇಬ್ಬರಿಗೆ ಜೈಲು ಶಿಕ್ಷೆ

ಬೆಂಗಳೂರು: ವಿಪ್ರೊ ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಮತ್ತು ಅವರ ಟ್ರಸ್ಟ್‌ ವಿರುದ್ಧ ತನಿಖೆ ಕೋರಿ ಹಲವು ಸುಳ್ಳು ಮೊಕದ್ದಮೆಗಳನ್ನು ಹೂಡಿದ್ದ ಸರಕಾರೇತರ ಸಂಸ್ಥೆ ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಪರೆನ್ಸಿ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ ವಕೀಲರಾದ ಆರ್‌. ಸುಬ್ರಮಣಿ ಮತ್ತು ಪಿ. ಸದಾನಂದ ಅವರಿಗೆ ಹೈಕೋರ್ಟ್‌ ಎರಡು ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ವಿಪ್ರೊ ಸಂಸ್ಥೆ, ಅಜೀಂ ಪ್ರೇಮ್‌ಜಿ ಮತ್ತಿತರರು ಸಲ್ಲಿಸಿದ್ದ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ಮನವಿ ಆಲಿಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾ.ಕೆ.ಎಸ್‌. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ಈ ಆದೇಶ ನೀಡಿದೆ. ಅಲ್ಲದೆ, ಆ ವಕೀಲರಿಗೆ ಅಜೀಂ ಪ್ರೇಮ್‌ಜಿ ಮತ್ತು ವಿಪ್ರೊ ಕಂಪನಿ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಬಗೆಯ ಕೇಸ್‌ ದಾಖಲಿಸದಂತೆ ನಿರ್ಬಂಧ ವಿಧಿಸಿದೆ.

ಪ್ರಕರಣದ ಎಲ್ಲ ಅಂಶಗಳನ್ನು ಆಧರಿಸಿ ಈ ಹಿಂದೆ ಏಕ ಸದಸ್ಯ ಪೀಠ ದಂಡ ವಿಧಿಸಿದ್ದು ಮತ್ತಿತರ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ, 110 ಪುಟಗಳ ಸುದೀರ್ಘ ಆದೇಶ ನೀಡಿದೆ. ಅದರಲ್ಲಿ, ಆರೋಪಿಗಳಾದ ಆರ್‌. ಸುಬ್ರಮಣಿ ಮತ್ತು ಪಿ. ಸದಾನಂದ ವಿರುದ್ಧದ ಆರೋಪಗಳು ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 2(3) ಅಡಿ ದೃಢಪಟ್ಟಿವೆ. ಪ್ರಕರಣದ ಅಂಶಗಳನ್ನು ಪರಿಶೀಲಿಸಿದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೈ ಬಿಡಲು ಯಾವುದೇ ಸಾಕ್ಷ್ಯಾಧಾರವಿಲ್ಲ. ಹಾಗಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ’ ಎಂದು ನ್ಯಾಯಪೀಠ ಆದೇಶಿಸಿದೆ.


ಆರೋಪಿಗಳಿಬ್ಬರು ಎರಡು ತಿಂಗಳು ಸಾದಾ ಜೈಲು ಶಿಕ್ಷೆಗೆ ಒಳಗಾಗಬೇಕು. ತಲಾ 2 ಸಾವಿರ ರೂ. ದಂಡ ವಿಧಿಸಬೇಕು. ದಂಡ ಪಾವತಿಸದಿದ್ದರೆ ಮತ್ತೆ ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ. ತೀರ್ಪು ಪ್ರಕಟಣೆ ನಂತರ ಆರೋಪಿಗಳು ಸುಪ್ರೀಂ ಕೋರ್ಟ್‌ನಲ್ಲಿ ಆದೇಶ ಪ್ರಶ್ನಿಸಲು ಸಮಯ ನೀಡಬೇಕೆಂದು ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ, ನಾಲ್ಕು ವಾರಗಳ ಕಾಲ ತೀರ್ಪು ಅಮಾನತಿನಲ್ಲಿರಿಸಲು ಆದೇಶಿಸಿದೆ.

Latest Indian news

Popular Stories

error: Content is protected !!