ಪ್ರಯಾಗ್ ರಾಜ್(ಉತ್ತರ ಪ್ರದೇಶ): ಪ್ರಯಾಗ್‌ರಾಜ್‌ನಲ್ಲಿ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸೋದರ ಅಶ್ರಫ್ ಅಹ್ಮದ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯನ್ನು ಸಂಭ್ರಮಿಸುತ್ತಿರುವವರು ರಣಹದ್ದುಗಳು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.
ಗುಂಡಿಕ್ಕಿ ಹತ್ಯೆ ಮಾಡುವ ಘಟನೆಯನ್ನು “ರಕ್ತರಪಾತದ ಕೊಲೆ” ಎಂದು ಅಸಾದುದ್ದೀನ್ ಓವೈಸಿ ಬಣ್ಣಿಸಿದ್ದಾರೆ. ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಇದರಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಪಾತ್ರವಿದೆ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ಸಮಿತಿಯನ್ನು ರಚಿಸಬೇಕು, ಉತ್ತರ ಪ್ರದೇಶದ ಯಾವುದೇ ಅಧಿಕಾರಿಯನ್ನು ಸಮಿತಿಗೆ ಸೇರಿಸಬಾರದು. ಇದೊಂದು ರಕ್ತಪಾತದ ಕೊಲೆ ಎಂದು ಟೀಕಿಸಿದ್ದಾರೆ.
ಕೊಲೆಗಾರರು ಆಯುಧಗಳನ್ನು ಹೇಗೆ ಪಡೆದರು, ಅವರನ್ನು ಕೊಂದ ನಂತರ ಏಕೆ ಧಾರ್ಮಿಕ ಘೋಷಣೆಗಳನ್ನು ಕೂಗಿದರು, ಅಂತವರನ್ನು ಭಯೋತ್ಪಾದಕರು ಎನ್ನದೆ ಬೇರೆ ಏನು ಕರೆಯಲು ಸಾಧ್ಯ, ದೇಶಪ್ರೇಮಿಗಳೆಂದು ಕರೆಯುತ್ತೀರಾ ಎಂದು ಕೇಳಿದ್ದಾರೆ.
ಈ ಘಟನೆಯು ಕಾನೂನು ಸುವ್ಯವಸ್ಥೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಈ ಘಟನೆಯ ನಂತರ ಸಾರ್ವಜನಿಕರಿಗೆ ಸಂವಿಧಾನ ಮತ್ತು ದೇಶದ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ನಂಬಿಕೆ ಉಳಿಯುತ್ತದೆಯೇ ಎಂದು ಓವೈಸಿ ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ಪಾಲಿಸುತ್ತಿಲ್ಲ, ಬಂದೂಕಿನ ಆಡಳಿತದಿಂದ ಸರ್ಕಾರ ನಡೆಸುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.