ವರದಿ: ಉಡುಪಿ ಪ್ರತಿನಿಧಿ
ಉಡುಪಿ: ಪರಿಶಿಷ್ಟ ಜಾತಿಯ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಾಭೀತಾಗಿದ್ದು ಅಪರಾಧಿಗೆ ಅಜೀವ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ತೀರ್ಪು ಪ್ರಕಟಿಸಿದ್ದಾರೆ.
ಪೋಕ್ಸೋ ಕಾಯ್ದೆಯಡಿಯಲ್ಲಿ 20 ವರ್ಷ ಪ್ರಾಯದ ಪಶ್ಚಿಮ ಬಂಗಾಳ ಮೂಲದ ರಾಜೀಬ್ ಅಲಿಯಾಸ್ ಚೋಟು ಎನ್ನುವ ಅಪರಾಧಿಗೆ ಅಜೀವ ಕಾರಾಗೃಹ ಶಿಕ್ಷೆ, 56 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ.
ಘಟನೆ ಹಿನ್ನೆಲೆ..
2018 ಪೆಬ್ರವರಿ ತಿಂಗಳಿನಲ್ಲಿ ಉಡುಪಿ ಜಿಲ್ಲೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪಶ್ಚಿಮ ಬಂಗಾಳ ಮೂಲದ ರಾಜೀಬ್ ರಸ್ತೆ ಕೆಲಸಕ್ಕೆಂದು ಬಂದಿದ್ದು 14 ವರ್ಷದ ಬಾಲಕಿಯನ್ನು ಮನೆಯಿಂದ ಅಪಹರಿಸಿದ್ದ. ಮಗಳು ಕಾಣೆಯಾದ ಬಗ್ಗೆ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಪ್ರಾಪ್ತೆಯನ್ನು ರೈಲು ನಿಲ್ದಾಣವೊಂದರಲ್ಲಿ ಪತ್ತೆ ಮಾಡಿ ಪೊಲೀಸರು ಕರೆತಂದಿದ್ದರು. ಬಳಿಕ ಆಪ್ತ ಸಮಾಲೋಚನೆ ವೇಳೆ ಬಾಲಕಿಯು ಒಂದನೇ ಆರೋಪಿ ರಾಜೀಬ್ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಇತರ ಐವರ ವಿರುದ್ಧ ಮಾಹಿತಿ ನೀಡಿದ ಆಧಾರದಲ್ಲಿ ಎಲ್ಲರನ್ನು ಬಂಧಿಸಲಾಗಿತ್ತು. ಮೊದಲಿಗೆ ಅಂದಿನ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಭಾಗಶಃ ತನಿಖೆ ನಡೆಸಿದ್ದು ತರುವಾಯ ಅಂದಿನ ಡಿವೈಎಸ್ಪಿ ಟಿ.ಆರ್ ಜೈಶಂಕರ್ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 46 ಸಾಕ್ಷಿಗಳ ಪೈಕಿ ನ್ಯಾಯಾಲಯದಲ್ಲಿ 28 ಸಾಕ್ಷಿಗಳ ವಿಚಾರಣೆ ನಡೆದಿದ್ದು ಸಂತ್ರಸ್ತ ಬಾಲಕಿ ನುಡಿದ ಸಾಕ್ಷ್ಯ ಹಾಗೂ ಆಕೆ ಸಹೋದರ, ಸಹೋದರಿ ಸಾಕ್ಷಿಗಳು, ಸಾಂದರ್ಭಿಕ ಸಾಕ್ಷಿಗಳು ಮೊದಲನೇ ಆರೋಪಿ ಅಪರಾಧಿ ಎಂಬುದನ್ನು ಸಾಭೀತುಪಡಿಸಲು ಪ್ರಾಸಿಕ್ಯೂಶನ್ ಪರವಾಗಿತ್ತು. ಉಳಿದ ಐವರು ಆರೋಪಿಗಳು ಖುಲಾಸೆಗೊಂಡಿದ್ದಾರೆ.
ಪ್ರಕರಣದಲ್ಲಿ ಅಪರಾಧಿಯಾದ ರಾಜಿಬ್ ಮೇಲೆ ಪರಿಶಿಷ್ಟ ಜಾತಿಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಕ್ಕೆ ಅಜೀವ ಕಾರಾಗೃಹ ಶಿಕ್ಷೆ ಸಹಿತ, ಅಪಹರಣ, ಅತ್ಯಾಚಾರ ಮೊದಲಾದ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಿದ್ದು 56 ಸಾವಿರ ದಂಡ ವಿಧಿಸಲಾಗಿದೆ. ಈ ದಂಡದಲ್ಲಿ 16 ಸಾವಿರ ರೂ. ಸರ್ಕಾರಕ್ಕೆ ಹಾಗೂ 40 ಸಾವಿರ ನೊಂದ ಬಾಲಕಿಗೆ ನೀಡಲು ಆದೇಶಿಸಿದ್ದಲ್ಲದೆ ಸಂತ್ರಸ್ತೆಗೆ 5 ಲಕ್ಷ ಪರಿಹಾರವನ್ನು ಸರ್ಕಾರ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ.
ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಪ್ರಾಸಿಕ್ಯೂಶನ್ ಪರವಾಗಿ ವಾದ ಮಂಡಿಸಿದ್ದರು.